ವಾಷಿಂಗ್ಟನ್: ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಅವರು ತಮ್ಮ ವರ್ತನೆಯನ್ನು ಬದಲಿಸಿದ ಹೊರತು, ಅವರೊಂದಿಗೆ ಮಾತುಕತೆ ನಡೆಸಲು ಯಾವುದೇ ಸಕಾರಣಗಳಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ನ್ಯಾಟೊ ಸಮಾವೇಶ ಸಮಾಪ್ತಿಗೊಂಡ ಬಳಿಕ ಗುರುವಾರ ವಾಷಿಂಗ್ಟನ್‌ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.
'ಸದ್ಯ ಪುಟಿನ್ ಅವರ ಜೊತೆ ಮಾತನಾಡಲು ಯಾವುದೇ ಸಕಾರಣಗಳಿಲ್ಲ. ಅವರು ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಲು ಸಿದ್ದರಿಲ್ಲ. ನಾನು ಮಾತ್ರವಲ್ಲ ವಿಶ್ವದ ಯಾವುದೇ ನಾಯಕರು ಪುಟಿನ್ ಜೊತೆ ಮಾತುಕತೆ ನಡೆಸಲು ಸಿದ್ದವಿಲ್ಲ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
'ಮಾತುಕತೆಗೆ ಪುಟಿನ್ ಸಿದ್ದರಿದ್ದಾರೆಯೇ? ಅವರು ತಮ್ಮ ನಡವಳಿಕೆ ಹಾಗೂ ಯೋಚನೆಯನ್ನು ಬದಲಿಸದ ಹೊರತು ಮಾತುಕತೆಗೆ ನಾನು ಸಿದ್ಧನಿಲ್ಲ. ಪುಟಿನ್ ಅವರಿಗೆ ಸಮಸ್ಯೆ ಇದೆ' ಎಂದು ಹೇಳಿದ್ದಾರೆ.
'ಮೊದಲನೆಯದಾಗಿ, ಯುದ್ಧದಲ್ಲಿ ಪುಟಿನ್ ಗೆದ್ದಿದ್ದಾರೆ ಎಂದು ಭಾವಿಸಲಾಗುತ್ತಿದೆ. ಆದರೆ ಅವರು ಹೇಳಿಕೊಳ್ಳುವಷ್ಟು ಯಶಸ್ಸು ಸಾಧಿಸಿಲ್ಲ. ಅವರು ಭೀಕರವಾದ ಹಾನಿ ಮತ್ತು ಪ್ರಾಣಹಾನಿಯನ್ನು ಉಂಟುಮಾಡಿದ್ದಾರೆ. ಅವರು 3.5 ಲಕ್ಷ ಸೈನಿಕರನ್ನು ಕಳೆದುಕೊಂಡಿದ್ದಾರೆ. ರಷ್ಯಾದಲ್ಲಿ ಭವಿಷ್ಯವಿಲ್ಲ ಎಂದು ದೇಶ ತೊರೆಯಲು 10 ಲಕ್ಷಕ್ಕೂ ಅಧಿಕ ಮಂದಿ ಸಜ್ಜಾಗಿದ್ದಾರೆ' ಎಂದು ಬೈಡನ್ ಹೇಳಿದ್ದಾರೆ.