ಕುಂಬಳೆ: ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮೂವತ್ತು ವರ್ಷಗಳಿಂದ ಯಕ್ಷಗಾನ ತಾಳಮದ್ದಳೆ ಕಲಾವಿದನಾಗಿಯೂ ರಂಗಸ್ಥಳ ಕಲಾವಿದನಾಗಿಯೂ ಹೆಸರುವಾಸಿಯಾದ ಯಕ್ಷಗಾನದ ತಾಯ್ನೆಲ ಕುಂಬಳೆಗೆ ಸಮೀಪದ ಮುಜುಂಗಾವು ನಿವಾಸಿ ಮಜಲು ಉದಯಶಂಕರ ಭಟ್ ಈಬಾರಿಯ ಮಳೆಗಾಲದ ಪ್ರವಾಸದ ಪ್ರಯುಕ್ತ ಮುಂಬಯಿ ಮಹಾನಗರದಲ್ಲಿ ನಡೆದ ತಾಳಮದ್ದಳೆಯಲ್ಲಿ ಅತ್ಯುತ್ತಮ ಅರ್ಥಗಾರಿಕೆಯಿಂದ ಮೆರೆದಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ನಂದಳಿಕೆಯ ವಿಶಾಲ ಯಕ್ಷಕಲಾಬಳಗ ಇವರಿಂದ ಜುಲೈ ಮೊದಲವಾರದಲ್ಲಿ ಮುಂಬಯಿ ಮಹಾನಗರದ ವಿವಿಧ ಸಭಾಮಂದಿರಗಳಲ್ಲಿ ನಡೆದ ತಾಳಮದ್ದಳೆಗಳಲ್ಲಿ ತಮ್ಮ ವಾಗ್ವೈಖರಿಯಿಂದ ಮಜಲು ಉದಯಶಂಕರ ಭಟ್ಟರು ತುಂಬಿದ ಸಭೆಯ ಯಕ್ಷಗಾನ ಕಲಾಭಿಮಾನಿಗಳಿಂದ ಅಭಿನಂದನೆಗೆ ಪಾತ್ರರಾಗಿದ್ದಾರೆ.
ಮುಂಬಯಿಯ ಚೆಂಬೂರು ಸುಬ್ರಹ್ಮಣ್ಯ ಮಠ, ನೇರೋಳು ಅಯ್ಯಪ್ಪ ದೇವಸ್ಥಾನ, ದೊಂಬಿವಿಲಿ ಸಭಾಭವನ ಎಂಬೆಡೆಗಳಲ್ಲಿ ವಿದುರ ಭಕ್ತಿ, ಕಂಸ ವಧೆ, ಮಾಯಾಮಂಥರೆ ಹಾಗೂ ತುಳು ಭಾμÉಯಲ್ಲಿ ಶನಿಗೆರೆಚಾರ ಎಂಬ ಪ್ರಸಂಗಗಳನ್ನು ಆಯ್ದುಕೊಂಡು ತಾಳಮದ್ದಳೆ ನಡೆಯಿತು.
ಭಾಗವತರಾಗಿ ವರ್ಕಾಡಿ ಗಣೇಶ ಮಯ್ಯ, ಹಿಮ್ಮೇಳದಲ್ಲಿ ಸ್ಕಂದ ಮಯ್ಯ, ಮೋಹನ ರೈ ಹಾಗೂ ಹರೀಶ ಸಾಲ್ಯಾನ್ ಸಹಕರಿಸಿದರು. ಅರ್ಥಗಾರಿಕೆಯಲ್ಲಿ ಉದಯಶಂಕರ ಭಟ್ ಮಜಲು ಅವರ ಜೊತೆ ನಂದಳಿಕೆ ಸುಬ್ರಹ್ಮಣ್ಯ ಬೈಪಡಿತ್ತಾಯ ಅವರು ಉತ್ತಮ ನಿರ್ವಹಣೆ ಮಾಡಿದರು.