ನವದೆಹಲಿ: ಕೋಚಿಂಗ್ ಸೆಂಟರ್‌ನ ನೆಲಮಹಡಿಗೆ ಮಳೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿರುವುದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ತರಬೇತಿ ಕೇಂದ್ರದ ಮಾಲೀಕ ಹಾಗೂ ನಿರ್ವಾಹಕರನ್ನು ಭಾನುವಾರ ಬಂಧಿಸಿದ್ದಾರೆ.
ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಸ್ಥಳದಲ್ಲಿ ಬಿಗುವಿನ ಸ್ಥಿತಿ ನಿರ್ಮಾಣವಾಯಿತು.
ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ದೆಹಲಿಯ ಓಲ್ಡ್ ರಾಜೇಂದ್ರ ನಗರದಲ್ಲಿರುವ 'ರಾವ್ಸ್ ಐಎಎಸ್ ಸ್ಟಡಿ ಸರ್ಕಲ್' ಕಟ್ಟಡದ ನೆಲಮಹಡಿಗೆ ನೀರು ನುಗ್ಗಿದೆ. ಈ ವೇಳೆ ಮೂವರು ಹೊರಬರಲಾರದೆ ಮುಳುಗಿ ಮೃತಪಟ್ಟಿದ್ದಾರೆ.
ಎನ್‌ಡಿಆರ್‌ಎಫ್ ಸಿಬ್ಬಂದಿ, ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ನಡೆಸಿದ ಕಾರ್ಯಾಚರಣೆ ವೇಳೆ ಮೂರು ಮೃತದೇಹಗಳು ದೊರೆತಿವೆ. 'ನೆಲಮಹಡಿ ಕೆಲವೇ ನಿಮಿಷಗಳಲ್ಲಿ ಮುಳುಗಿದ್ದರಿಂದ ಕೆಲವರಿಗೆ ಹೊರಬರಲು ಸಾಧ್ಯವಾಗಲಿಲ್ಲ' ಎಂದು ಡಿಸಿಪಿ (ಕೇಂದ್ರ ದೆಹಲಿ) ಎಂ. ಹರ್ಷವರ್ಧನ ತಿಳಿಸಿದರು.
ತನಿಖೆಗೆ ತಂಡ ರಚನೆ: 'ಘಟನೆಗೆ ಸಂಬಂಧಿಸಿದಂತೆ ಕೋಚಿಂಗ್ ಸೆಂಟರ್‌ನ ಮಾಲೀಕ ಅಭಿಷೇಕ್ ಗುಪ್ತಾ ಮತ್ತು ನಿರ್ವಾಹಕ ದೇಶಪಾಲ್ ಸಿಂಗ್ ಅವರನ್ನು ಬಂಧಿಸಲಾಗಿದೆ' ಎಂದು ಮಾಹಿತಿ ನೀಡಿದರು.
'ತನಿಖೆಗೆ ಹಲವು ತಂಡಗಳನ್ನು ರಚಿಸಲಾಗಿದೆ. ಕಟ್ಟಡ ಮತ್ತು ನೆಲಮಹಡಿಗೆ ಸಂಬಂಧಿಸಿ ವರದಿ ನೀಡುವಂತೆ ಅಗ್ನಿಶಾಮಕ ದಳಕ್ಕೆ ಸೂಚಿಸಲಾಗಿದೆ. ತಳಮಹಡಿಯು ನೆಲಮಟ್ಟದಿಂದ ಎಂಟು ಅಡಿಗಳಷ್ಟು ಕೆಳಕ್ಕೆ ಇದ್ದು, ನೀರು ನುಗ್ಗುವ ವೇಳೆ ಅಲ್ಲಿ 18 ವಿದ್ಯಾರ್ಥಿಗಳಿದ್ದರು' ಎಂದು ತಿಳಿಸಿದರು.
ಸ್ಟೋರ್ ರೂಂ ಬದಲು ಗ್ರಂಥಾಲಯ: ಕೋಚಿಂಗ್ ಸೆಂಟರ್‌ನ ನೆಲಮಹಡಿಯನ್ನು ಸ್ಟೋರ್ ರೂಂ (ಉಗ್ರಾಣ) ಆಗಿ ಬಳಸಲು ಮಾತ್ರ ಅನುಮತಿ ನೀಡಲಾಗಿತ್ತು. ಆದರೆ ಅದನ್ನು ಗ್ರಂಥಾಲಯವಾಗಿ ಬಳಸಿ, ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನೆಲಮಹಡಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವ ಎಲ್ಲ ಕೋಚಿಂಗ್ ಸೆಂಟರ್‌ಗಳು ಮತ್ತು ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೆಹಲಿ ಮೇಯರ್ ಶೆಲ್ಲಿ ಒಬೆರಾಯ್ ಅವರು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದಾರೆ.