ಕಾಸರಗೋಡು: ವಿಶ್ವ ಪ್ರಾಣಿಜನ್ಯ ರೋಗಗಳ ದಿನಾಚರಣೆ ಜಿಲ್ಲಾ ಮಟ್ಟದ ಉದ್ಘಾಟನೆ ಹಾಗೂ ಜಾಗೃತಿ ವಿಚಾರ ಸಂಕಿರಣ ಕಾರಡ್ಕ ಬ್ಲಾಕ್ ಪಂಚಾಯಿತಿ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಕುತ್ತಿಕೋಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಮುರಳಿ ಪಯ್ಯಂಗಾನಂ ನೆರವೇರಿಸಿದರು.
ಕಾರಡ್ಕ ಬ್ಲಾಕ್ ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸವಿತಾ.ಪಿ ಅಧ್ಯಕ್ಷತೆ ವಹಿಸಿದ್ದರು. ಕುತ್ತಿಕೋಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶೋಭನಾ ಕುಮಾರಿ, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಮೀರ್ ಕುಂಭಕೋಟ್, ವಾರ್ಡ್ ಸದಸ್ಯರಾದ ವಿ. ಕೃಷ್ಣನ್, ಮಾಧವನ್ ಪಿ, ಕೆ.ಆರ್.ವೇಣು, ಜಿಲ್ಲಾ ಡೆಪ್ಯುಟಿ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಪ್ರಶಾಂತ್ ಎನ್.ಪಿ, ಕುತ್ತಿಕೋಲ್ ಗ್ರಾಮ ಪಂಚಾಯತ್ ಕಾರ್ಯದರ್ಶಿಅನಿಲ್ ಕುಮಾರ್ ಉಪಸ್ಥಿತರಿದ್ದರು. ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್ ಸ್ವಾಗತಿಸಿದರು. ಬಂದಡ್ಕ ಕುಟುಂಬ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಸುನೀಶ ಜಾರ್ಜ್ ವಂದಿಸಿದರು.
ಈ ಸಂದರ್ಭ ಆನಂದಾಶ್ರಮ ಕುಟುಂಬ ಆರೋಗ್ಯ ಕೇಂದ್ರದ ಸಹಾಯಕ ಸರ್ಜನ್ ಡಾ.ವಿದ್ಯಾ ಕೆ, ಕುತ್ತಿಕ್ಕೋಲ್ ಸರ್ಕಾರಿ ಪಶುವೈದ್ಯಕೀಯ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಜಯಕೃಷ್ಣನ್ ಬಿ. ವಿಚಾರ ಸಂಕಿರಣದಲ್ಲಿಪ್ರಬಂಧ ಮಂಡಿಸಿದರು. ಹಸಿರು ಕ್ರಿಯಾ ಸೇನೆ, ಕುಟುಂಬಶ್ರೀ ಕಾರ್ಯಕರ್ತರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪ್ರಚಾರಕರು ಆಶಾ ಕಾರ್ಯಕರ್ತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಜಿಲ್ಲಾ ವೈದ್ಯಕೀಯ ಕಛೇರಿ (ಆರೋಗ್ಯ) ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿದೆ.
ಪ್ರಾಣಿಜನ್ಯ ರೋಗ-ಮುನ್ನೆಚ್ಚರಿಕೆ ಅಗತ್ಯ:
ಪ್ರಾಣಿಗಳೊಂದಿಗಿನ ನೇರ ಮತ್ತು ಪರೋಕ್ಷ ಸಂಪರ್ಕ, ಅವುಗಳ ದೇಹದ ದ್ರವಗಳ ಸಂಪರ್ಕ, ಸಾಕುಪ್ರಾಣಿಗಳ ವಾಸ್ತವ್ಯ ಸಥಳಗಳಾದ ಹಟ್ಟಿ ಮತ್ತು ಫಾರ್ಮ್‍ಗಳಲ್ಲಿನ ಸಾಕುಪ್ರಾಣಿಗಳ ನಿರ್ವಹಣೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗಿದೆ. ಸಾಕುಪ್ರಾಣಿಗಳ ಸಂಪರ್ಕಕ್ಕೆ ಹೋದ ತಕ್ಷಣ ಕೈ, ಕಾಲುಗಳನ್ನು ಸಾಬೂನು ಬಳಸಿ ನೀರಿನಿಂದ ತೊಳೆಯಬೇಕು. ಸಾಕುಪ್ರಾಣಿಗಳಿಂದ ನಿಮ್ಮ ಮುಖ ಅಥವಾ ಶರೀರದ ಭಾಗ ನೆಕ್ಕಲು ಬಿಡಬಾರದು, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರು, ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಮತ್ತು ಗರ್ಭಿಣಿಯರು ಪ್ರಾಣಿಗಳ ನಿರ್ವಹಣೆ ಸಂದರ್ಭ ಎಚ್ಚರಿಕೆ ವಹಿಸಬೇಕು. ಪ್ರಾಣಿಗಳ ಕಡಿತ ಅಥವಾ ಗೀರುಗಳನ್ನು ತಕ್ಷಣವೇ ಸಾಬೂನು ಮತ್ತು ನೀರಿನಿಂದ ತೊಳೆದು ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಸಾಕುಪ್ರಾಣಿಗಳಿಗೆ ಲಸಿಕೆಗಳನ್ನು ಸಕಾಲಕ್ಕೆ ನೀಡಬೇಖು. ಅರಣ್ಯ ಪ್ರದೇಶಗಳಲ್ಲಿ ಕೆಲಸ ಮತ್ತು ಮನರಂಜನೆಗಾಗಿ ಹೋಗುವಾಗ ಅಗತ್ಯ ವೈಯಕ್ತಿಕ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದೂ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.