ಕೋಲ್ಕತ್ತ: ನೂತನವಾಗಿ ಆಯ್ಕೆಯಾದ ತೃಣಮೂಲ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರಿಗೆ ಪಶ್ಚಿಮ ಬಂಗಾಳದ ಸ್ಪೀಕರ್ ಪ್ರಮಾಣವಚನ ಬೋಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ತಿಕ್ಕಾಟ ಮುಂದುವರಿದಿದೆ.
ಪ್ರಮಾಣವಚನದ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಇಬ್ಬರೂ ಶಾಸಕರಿಗೆ ರಾಜಭವನದಿಂದ ಇ-ಮೇಲ್ ಮಾಡಲಾಗಿದ್ದು, ತಲಾ ₹500 ದಂಡ ಪಾವತಿಸುವಂತೆ ಸೂಚಿಸಲಾಗಿದೆ.
ಮುರ್ಷಿದಾಬಾದ್ ಜಿಲ್ಲೆಯ ಭಾಗಬಂಗೋಲಾ ಶಾಸಕ ರಾಯತ್ ಹೊಸೈನ್ ಸರ್ಕಾರ್, ಕೋಲ್ಕತ್ತ ಹೊರವಲಯದ ಬಾರಾನಗರ ಕ್ಷೇತ್ರದ ಶಾಸಕಿ ಸಯಾಂತಿಕಾ ಬ್ಯಾನರ್ಜಿ ಅವರಿಗೆ ರಾಜಭವನಕ್ಕೆ ಬಂದು ಪ್ರಮಾಣ ವಚನ ಸ್ವೀಕರಿಸುವಂತೆ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಆಹ್ವಾನ ನೀಡಿದ್ದರು. ಇದನ್ನು ಇಬ್ಬರು ಶಾಸಕರು ತಿರಸ್ಕರಿಸಿ, ಪ್ರತಿಭಟನೆ ನಡೆಸಿದ್ದರು. ಬಳಿಕ ಈ ಜವಾಬ್ದಾರಿಯನ್ನು ರಾಜ್ಯಪಾಲರು ಡೆಪ್ಯುಟಿ ಸ್ಪೀಕರ್‌ಗೆ ವಹಿಸಿದ್ದರು.
ರಾಜ್ಯಪಾಲರ ಸೂಚನೆ ಧಿಕ್ಕರಿಸಿ, ಜುಲೈ5ರ ವಿಶೇಷ ಅಧಿವೇಶನದಲ್ಲಿ ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರು ಪ್ರಮಾಣವಚನ ಬೋಧಿಸಿದ್ದರು.
'ಮೊದಲ ದಿನವೇ ಸಂವಿಧಾನದ ನಿಯಾಮವಳಿಗಳನ್ನು ಉಲ್ಲಂಘನೆ ಮಾಡಿದಕ್ಕಾಗಿ ₹500 ದಂಡ ಪಾವತಿಸುವಂತೆ ಸೂಚಿಸಿ ಮೇಲ್ ಮೂಲಕ ತಿಳಿಸಲಾಗಿದೆ' ಎಂದು ಶಾಸಕ ರಾಯತ್ ಹೊಸೈನ್ ದೂರಿದರು.
'ನಾವು ಸ್ಪೀಕರ್ ಅವರನ್ನು ಭೇಟಿಯಾಗಿ ಇ-ಮೇಲ್ ಕುರಿತು ಮಾಹಿತಿ ನೀಡಿದ್ದೇವೆ. ಈ ಬಗ್ಗೆ ಗಮನಹರಿಸಲಾಗುವುದು ಎಂದು ಸ್ಪೀಕರ್ ಕಚೇರಿ ತಿಳಿಸಿದೆ. ಸದನಕ್ಕೆ ಹಾಜರಾಗಲು ಯಾವುದೇ ಸಮಸ್ಯೆಯಿಲ್ಲ. ಜನಪ್ರತಿನಿಧಿಯಾಗಿ ಆಯ್ಕೆಯಾಗಿ, ಪ್ರಜಾಪ್ರಭುತ್ವದ ದೇಗುಲದಲ್ಲೇ ಪ‍್ರಮಾಣವಚನ ಸ್ವೀಕರಿಸಿದ್ದೇವೆ' ಎಂದು ಸಯಾಂತಿಕಾ ಬ್ಯಾನರ್ಜಿ ತಿಳಿಸಿದರು.
ಸೋಮವಾರದಿಂದೇ ಪಶ್ಚಿಮ ಬಂಗಾಳ ವಿಧಾನಸಭೆಯ 10ದಿನಗಳ ಅಧಿವೇಶನ ಆರಂಭಗೊಂಡಿದೆ. 'ಈಗಾಗಲೇ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಸದನದಲ್ಲಿ ಎಂದಿನಂತೆ ಹಾಜರಾಗುತ್ತೇವೆ' ಎಂದು ಸಯಾಂತಿಕಾ ತಿಳಿಸಿದ್ದಾರೆ.
'ನಾನು ಏಕೆ ದಂಡ ಪಾವತಿಸಬೇಕು? ಯಾವುದಾದರೂ ಅಕ್ರಮ ಅಥವಾ ಅನುಚಿತವಾಗಿ ನಡೆದುಕೊಂಡಿಲ್ಲ' ಎಂದು ತಿರುಗೇಟು ನೀಡಿದರು.
ಇ-ಮೇಲ್ ಕಳುಹಿಸಿದ್ದನ್ನು ರಾಜಭವನದ ಮೂಲಗಳು ಖಚಿತಪಡಿಸಿವೆ. ಈ ಬಗ್ಗೆ ಸ್ಪೀಕರ್ ಯಾವುದೇ ಹೇಳಿಕೆ ನೀಡಿಲ್ಲ.