ಕಾಸರಗೋಡು: ಕೈಮಗ್ಗದ ಬಟ್ಟೆಗಳಿಗೆ ಉತ್ತೇಜನ ನೀಡುವ ಜಿಲ್ಲಾಡಳಿತದ ಸುಧಾರಣಾ ಕ್ರಮಗಳ ಅಂಗವಾಗಿ ಕಾಸರಗೋಡು ಸೀರೆ ಖರೀದಿದಾರರಿಗೆ ನೀಡಿರುವ ಮಾಲೀಕತ್ವ ಚೀಟಿಯನ್ನು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಬಿಡುಗಡೆಗೊಳಿಸಿದರು. ಜಿಲ್ಲಾಧಿಕಾರಿಗಳ ಚೇಂಬರ್‍ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ.ಸಜಿತ್ ಕುಮಾರ್, ಕಾಸರಗೋಡು ಸೀರೆಗಳ ವಿಶೇಷ ಅಧಿಕಾರಿ ಆದಿಲ್ ಮುಹಮ್ಮದ್, ಕಾಸರಗೋಡು ನೇಕಾರರ ಸಹಕಾರ ಸಂಘದ ಅಧ್ಯಕ್ಷ ಕೆ. ಮಾಧವ ಹೇರಳ, ಕಾರ್ಯದರ್ಶಿ ಬಿ.ಎನ್.ಅನಿತಾ, ನಿರ್ದೇಶಕರಾದ ದಾಮೋದರ, ರಾಮಚಂದ್ರ, ಗಂಗಮ್ಮ, ಲಿಜಾತೋಮಸ್, ಮಮತಾ ಮೊದಲಾದವರು ಉಪಸ್ಥಿತರಿದ್ದರು.
ಜಾಗತಿಕ ಸೂಚ್ಯಂಕ ಪ್ರಮಾಣಪತ್ರ ಲಭಿಸಿರುವ ಭಾರತೀಯ ಕೈಮಗ್ಗ ಬ್ರಾಂಡ್ ಆಗಿರುವ ಕಾಸರಗೋಡಿನ ಸ್ವಂತ ಉತ್ಪನ್ನವಾಗಿರುವ 'ಕಾಸರಗೋಡು ಸೀರೆಗಳ' ಮಾರುಕಟ್ಟೆವಿಪುಲೀಕರಿಸಲು ಹಾಗೂ ಜಿಲ್ಲೆಗೆ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಜಿಲ್ಲಾಡಳಿತ ಸಿದ್ಧಗೊಳಿಸಿರುವ ವಿನೂತನ ಯೋಜನೆಯ ಭಾಗ ಇದಾಗಿದೆ. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿದೆ. 1938ರಲ್ಲಿ ಸ್ಥಾಪನೆಗೊಂಡಿರುವ ಕಾಸರಗೊಡು ಸಾರೀಸ್ ಸಮಸ್ಥೆಯಲ್ಲಿ 800ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಲ್ಲಿ, ಇಂದು 25ಮಂದಿ ಮಹಿಳೆಯರು ಹಾಗೂ ಹತ್ತು ಮಂದಿ ಪುರುಷರು ಸೇರಿದಂತೆ 35ಕ್ಕೆ ಸೀಮಿತಗೊಂಡಿದೆ.
ಕಾಸರಗೋಡು ಸೀರೆಯು ಕಾಸರಗೋಡು ಜಿಲ್ಲೆಯ ನೇಕಾರರು ಮಾತ್ರ ತಯಾರಿಸುವ ಸಾಂಪ್ರದಾಯಿಕ ಹತ್ತಿಯಿಂದ ತಯಾರಿಸಲಾಗುವ ಸೀರೆಯಾಗಿದೆ. ಕೈಮಗ್ಗಗಳಿಂದ ತಯಾರಿಸುತ್ತಿರುವುದರಿಂದ ಹೆಚ್ಚಿನ ಬಾಳ್ವಿಕೆಗೆ ಹೆಸರಾಗಿದೆ. ಕೇರಳದ ಸಾಂಪ್ರದಾಯಿಕ ಸೀರೆಗಿಂತ ಭಿನ್ನವಾಗಿರುವ ಕರಾವಳಿ ಶೈಲಿಯ ಮೆರಗು ಕಾಸರಗೋಡು ಸಾರಿಗಿದೆ. ಇದು ಕೇರಳದಲ್ಲಿರುವ ಬಲರಾಮಪುರಂ, ಕುತ್ತಂಪಲ್ಲಿ ಮತ್ತು ಚೆಂದಮಂಗಲಂನ ನೇಯ್ಗೆ ಕೇಂದ್ರಗಳ ಸಾಲಿಗೆ ಸೇರ್ಪಡೆಗೊಂಡಿದೆ. 2010 ರಿಂದ, ಭಾರತ ಸರ್ಕಾರವು ಇದನ್ನು ಜಿಯೋ-ಸೂಚ್ಯಂಕ ಸ್ಥಾನಮಾನ ಹೊಂದಿರುವ ಉತ್ಪನ್ನವೆಂದು ಗುರುತಿಸಿದೆ. ಪ್ರಸಕ್ತ ಕಾಸರಗೋಡು ಸೀರೆಗಳು ಭಾರತೀಯ ಹ್ಯಾಂಡಲ್, ಬ್ರ್ಯಾಂಡ್ ಮತ್ತು ಕೇರಳ ಹ್ಯಾಂಡಲ್ ಬ್ರ್ಯಾಂಡ್ ಸೀಲ್‍ಗಳನ್ನು ಹೊಂದಿರುವ ಉತ್ಪನ್ನವಾಗಿ ಖ್ಯಾತಿಗಳಿಸಿದೆ.