ಬದಿಯಡ್ಕ: ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಕಾಸರಗೋಡು ಜಿಲ್ಲಾ ಘಟಕದ ನೇತೃತ್ವದಲ್ಲಿ ಕನ್ನಡ ಪತ್ರಿಕಾ ದಿನಾಚರಣೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಸೋಮವಾರ ಜರುಗಿತು. ಕೆಯುಬ್ಲುಜೆ ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪತ್ರಿಕೆಯು ಸಮಾಜದ ಕಣ್ಣು. ಅದನ್ನು ರಕ್ಷಿಸುವ ಮಹತ್ತರವಾದ ಜವಾಬ್ದಾರಿ ನಮ್ಮಮೇಲಿದೆ. ವಿದ್ಯಾರ್ಥಿಗಳು ಪತ್ರಿಕೆಯ ಓದಿನ ಕಡೆಗೂ ಗಮನವನ್ನು ನೀಡಬೇಕೆಂದು ತಿಳಿಸಿದರು.
ಹಿರಿಯ ಭಾಷಾ ತಜ್ಞ ನಿವೃತ್ತ ಪ್ರಾಂಶುಪಾಲ ಡಾ. ಬೇ.ಸೀ. ಗೋಪಾಲಕೃಷ್ಣ ಭಟ್ ಪತ್ರಿಕಾ ಸಂದೇಶವನ್ನು ನೀಡಿ ವರದಿಗಾರರು ಆಳವಾದ ಭಾಷಾಜ್ಞಾನವನ್ನು ಹೊಂದಿರಬೇಕು. ಮಲಯಾಳೀಕರಣದ ಪ್ರಭಾವದಿಂದ ಕಾಸರಗೋಡಿನ ಅನೇಕ ಸ್ಥಳನಾಮಗಳು ಬದಲಾಗುತ್ತಾ ಇರುವುದನ್ನು ನಾವು ಗಮನಿಸಬೇಕು. ಪತ್ರಿಕೆಯನ್ನು ಓದಿದಾಗ ಕನ್ನಡದ ಸಮಗ್ರ ಚಿತ್ರಣ, ಸಂಸ್ಕøತಿ, ಭಾವನೆ ಅನಾವರಣಗೊಳ್ಳುವಂತಿರಬೇಕು ಎಂದು ತಿಳಿಸಿದರು.
ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಪ್ರಬಂಧಕ ಜಯಪ್ರಕಾಶ್ ಪಜಿಲ, ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ನಿವೃತ್ತ ಪ್ರಾಧ್ಯಾಪಕ ಎ. ಶ್ರೀನಾಥ್, ಹಿರಿಯ ಪತ್ರಕರ್ತ ಅಚ್ಚುತ ಚೇವಾರ್, ಪೈವಳಿಕೆ ಗ್ರಾಮಪಂಚಾಯಿತಿ ಸ್ಥಾಯಿಸಮಿತಿ ಅಧ್ಯಕ್ಷ ಝಡ್.ಎ. ಕಯ್ಯಾರು, ಗಡಿನಾಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಚನಿಯಪ್ಪ ನಾಯ್ಕ್ ಉಪಸ್ಥಿತರಿದ್ದರು. ಈ ಸಂದರ್ಭ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಗಿ ಆಯ್ಕೆಗೊಂಡ ಎ.ಆರ್. ಸುಬ್ಬಯ್ಯಕಟ್ಟೆ ಅವರನ್ನು ಶ್ರೀ ಭಾರತೀ ವಿದ್ಯಾಪೀಠದ ವತಿಯಿಂದ ಗೌರವಿಸಲಾಯಿತು.
ಗಂಗಾಧರ ತೆಕ್ಕೆಮೂಲೆ ಸ್ವಾಗತಿಸಿದರು. ಪುರುಷೋತ್ತಮ ಪೆರ್ಲ ಕಾರ್ಯಕ್ರಮ ನಿರೂಪಿಸಿದರು. ವಕೀಲ ಥೋಮಸ್ ಡಿಸೋಜ ಸೀತಾಂಗೋಳಿ ವಂದಿಸಿದರು.