ನವದೆಹಲಿ: ತಮ್ಮ ಕ್ಷಮಾದಾನ ರದ್ದು ಮಾಡಿದ ಜನವರಿ 8ರ ತೀರ್ಪನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದ ಅಪರಾಧಿಗಳು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಅರ್ಜಿಯು ಸಂಪೂರ್ಣ ದುರುದ್ದೇಶದಿಂದ ಕೂಡಿದೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರ ಪೀಠವು ಹೇಳಿತು.
'ಸಂವಿಧಾನದ ಪರಿಚ್ಛೇದ 32ರಡಿ ಈ ಅರ್ಜಿ ಸಲ್ಲಿಸಲು ಹೇಗೆ ಸಾಧ್ಯ? ಇನ್ನೊಂದು ಪೀಠ ನೀಡಿದ ತೀರ್ಪಿನ ವಿರುದ್ಧ ನೀಡಲಾದ ಮೇಲ್ಮನವಿಯನ್ನು ನಾವು ಆಲಿಸಲು ಸಾಧ್ಯವಿಲ್ಲ' ಎಂದು ನುಡಿದಿದೆ.
ಅಪರಾಧಿಗಳಾದ ರಾಧೇಶ್ಯಾಮ್ ಭಗವಾನದಾಸ ಶಾ ಮತ್ತು ರಾಜುಭಾಯ್ ಬಾಬುಲಾಲ್ ಸೋನಿ ಪರ ವಕೀಲ ರಿಷಿ ಮಲ್ಹೋತ್ರಾ ಅವರು, ಅರ್ಜಿಯನ್ನು ಹಿಂಪಡೆಯಲು ಅವಕಾಶ ನೀಡಿ ಎಂದು ಅನುಮತಿ ಕೋರಿದರು.
ಅರ್ಜಿಯನ್ನು ಹಿಂಪಡೆಯಲು ವಕೀಲರಿಗೆ ಪೀಠವು ಅವಕಾಶ ನೀಡಿತು.
2002ರಲ್ಲಿ ಗೋಧ್ರಾ ರೈಲು ದುರಂತದ ಬಳಿಕ ಗುಜರಾತ್‌ನಲ್ಲಿ ನಡೆದಿದ್ದ ಹಿಂಸಾಚಾರದ ವೇಳೆ ಸುರಕ್ಷಿತ ಜಾಗಕ್ಕೆ ತೆರಳುತ್ತಿದ್ದ ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಅವರ ಮೂರು ವರ್ಷದ ಮಗಳೂ ಸೇರಿದಂತೆ, ಕುಟುಂಬದ 7 ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಆಗ 21 ವರ್ಷದವರಾಗಿದ್ದ ಬಾನು, ಐದು ತಿಂಗಳ ಗರ್ಭಿಣಿಯೂ ಆಗಿದ್ದರು.
ಇದರಲ್ಲಿ ಬಕಾಭಾಯಿ ವೋಹಾನಿಯಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೋಹಾನಿಯಾ, ಗೋವಿಂದ್ ನಾಯ್, ಜಸ್ವಂತ್ ನಾಯ್, ಮಿತೇಶ್ ಭಟ್, ಪ್ರದೀಪ್ ಮೋರ್ಧಿಯಾ, ರಾಧೇಶ್ಯಾಮ್ ಶಾ, ರಾಜುಭಾಯ್ ಸೋನಿ, ರಮೇಶ್ ಚಂದನಾ ಮತ್ತು ಶೈಲೇಶ್ ಭಟ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇವರ ಮೇಲಿನ ಆರೋಪ ಸಾಭೀತಾಗಿದ್ದರಿಂದ 2008ರಲ್ಲಿ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ, ಗುಜರಾತ್ ಸರ್ಕಾರದ ಆದೇಶದ ಮೇರೆಗೆ ಎಲ್ಲ ಅಪರಾಧಿಗಳು 2022ರ ಆಗಸ್ಟ್ 15ರಂದು ಜೈಲಿನಿಂದ ಬಿಡುಗಡೆಯಾಗಿದ್ದರು.
ಇದನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೊ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಪೀಠವು, ಈ ವಿಷಯವನ್ನು ನಿರ್ಧರಿಸಬೇಕಿರುವುದು ಆಗ ಪ್ರಕರಣ ದಾಖಲಿಸಿದ ಮಹಾರಾಷ್ಟ್ರ ಸರ್ಕಾರವೇ ಹೊರತು, ಗುಜರಾತ್ ಅಲ್ಲ ಎಂದು ಹೇಳಿತ್ತು. ಜತೆಗೆ ಅಪರಾಧಿಗಳಿಗೆ ಕ್ಷಮಾದಾನ ನೀಡುವ ಪ್ರಕ್ರಿಯೆಯಲ್ಲಿ ಗುಜರಾತ್ ಸರ್ಕಾರವು ತನ್ನ ವಿವೇಚನಾ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಹೇಳಿ, ಅಪರಾಧಿಗಳು ಮುಂದಿನ 2 ವಾರದೊಳಗೆ ಜೈಲಿಗೆ ಹಿಂದಿರುಗಬೇಕು ಎಂದು ಜ. 8ರಂದು ಆದೇಶಿಸಿತ್ತು.
ಸುಪ್ರೀಂ ಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ರಾಧೇಶ್ಯಾಮ್ ಭಗವಾನದಾಸ ಶಾ ಮತ್ತು ರಾಜುಭಾಯ್ ಬಾಬುಲಾಲ್ ಸೋನಿ ಮೇಲ್ಮನವಿ ಸಲ್ಲಿಸಿದ್ದಾರೆ. 'ಕ್ಷಮಾದಾನ ರದ್ದುಪಡಿಸಿರುವ ತೀರ್ಪು, 2002ರ ಸಂವಿಧಾನ ಪೀಠ ನೀಡಿದ್ದ ಆದೇಶಕ್ಕೆ ವ್ಯತಿರಿಕ್ತವಾಗಿದೆ. ಆದ್ದರಿಂದ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಒಪ್ಪಿಸಬೇಕು' ಎಂದು ಮೇಲ್ಮನವಿ ಸಲ್ಲಿಸಿದ್ದರು.