ನವದೆಹಲಿ: ಮಾತನಾಡಲು ಸಮಯ ನಿರಾಕರಿಸಿದ್ದನ್ನು ಪ್ರತಿಭಟಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ನೀತಿ ಆಯೋಗದ ಸಭೆಯಿಂದ ಹೊರನಡೆದಿದ್ದಾರೆ.
ಕೇವಲ ಐದು ನಿಮಿಷ ಮಾತನಾಡಿದ ಬಳಿಕ ನನ್ನನ್ನು ತಡೆದಿದ್ದಾರೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಕೇಂದ್ರ ಬಜೆಟ್ ಅನ್ನೂ ಟೀಕಿಸಿರುವ ಅವರು, ತಾರತಮ್ಯದ ಬಜೆಟ್ ಎಂದು ಕಿಡಿಕಾರಿದ್ದಾರೆ.
'ಸಭೆಯನ್ನು ಬಹಿಷ್ಕರಿಸಿ ನಾನು ಹೊರಗೆ ಬಂದಿದ್ದೇನೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಮಾತನಾಡಲು 20 ನಿಮಿಷ ನೀಡಲಾಯಿತು. ಅಸ್ಸಾಂ, ಗೋವಾ, ಛತ್ತೀಸಗಢ ಮುಖ್ಯಮಂತ್ರಿಗಳೂ 10-12 ನಿಮಿಷ ಮಾತನಾಡಿದರು. ನಾನು ಮಾತು ಪ್ರಾರಂಭಿಸಿದ 5 ನಿಮಿಷವಾಗುವಾಗಲೇ ತಡೆದರು. ಇದು ಸರಿಯಲ್ಲ. ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ನಾನೊಬ್ಬಳೇ ಹಾಜರಿದ್ದೆ. ಸಹಕಾರಿ ಒಕ್ಕೂಟವನ್ನು ಬಲಪಡಿಸಬೇಕು ಎಂಬ ಕಾರಣಕ್ಕೆ ನಾನು ಸಭೆಯಲ್ಲಿ ಭಾಗವಹಿಸಿದ್ದೆ' ಎಂದು ಮಮತಾ ಹೇಳಿದ್ದಾರೆ.
'ಬಜೆಟ್ ಕೂಡ ರಾಜಕೀಯ ಹಾಗೂ ತಾರತಮ್ಯದಿಂದ ಕೂಡಿದೆ. ನೀವ್ಯಾಕೆ ತಾರತಮ್ಯ ಮಾಡುತ್ತಿದ್ದೀರಿ ಎಂದು ನಾನು ಪ್ರಶ್ನಿಸಿದೆ. ನೀತಿಯ ಆಯೋಗಕ್ಕೆ ಹಣಕಾಸಿನ ಯಾವುದೇ ಅಧಿಕಾರ ಇಲ್ಲ. ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ. ಅದಕ್ಕೆ ಹಣಕಾಸಿನ ಅಧಿಕಾರ ನೀಡಿದ ಅಥವಾ ಯೋಜನಾ ಆಯೋಗವನ್ನು ಮತ್ತೆ ಜಾರಿಗೆ ತನ್ನಿ' ಎಂದು ಸಭೆಯಿಂದ ಹೊರಬಂದ ಬಳಿಕ ಮಾಧ್ಯಮದವರೊಂದಿಗೆ ಮಮತಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯುತ್ತಿದೆ.