ನವದೆಹಲಿ: ಗುಜರಾತ್‌ನಲ್ಲಿನ ಗಲಭೆ ಹಿನ್ನೆಲೆಯಲ್ಲಿ ಆಗ ಮುಖ್ಯಮಂತ್ರಿ ಸ್ಥಾನದಿಂದ ನರೇಂದ್ರ ಮೋದಿ ಅವರನ್ನು ಪದಚ್ಯುತಗೊಳಿಸಬೇಕು ಎಂದು ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಒತ್ತಾಯಿಸಿದ್ದರು. ಇದನ್ನು ಬಿಜೆಪಿ ಸಂಸದೀಯ ಮಂಡಳಿ ತಿರಸ್ಕರಿಸಿದಾಗ, ತಮ್ಮ ಅಸಮಾಧಾನವನ್ನು ದಾಖಲಿಸಲೂ ವಾಜಪೇಯಿ ಬಯಸಿದ್ದರು.
ಮಾಜಿ ಉಪ ರಾಷ್ಟ್ರಪತಿ, ಬಿಜೆಪಿಯ ಹಿರಿಯ ಮುಖಂಡ ವೆಂಕಯ್ಯ ನಾಯ್ಡು ಅವರ ಜೀವನಚರಿತ್ರೆ ಕುರಿತ ನೂತನ ಈ ಕೃತಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ. ಆದರೆ, ನಾಯ್ಡು ಅವರ ಮನವೊಲಿಕೆಯಿಂದಾಗಿ ವಾಜಪೇಯಿ ಅವರು ತಮ್ಮ ಅಸಮಾಧಾನವನ್ನು ಅಧಿಕೃತವಾಗಿ ದಾಖಲಿಸಲಿಲ್ಲ.
'ವೆಂಕಯ್ಯ ನಾಯ್ಡು: ಎ ಲೈಫ್ ಇನ್ ಸರ್ವೀಸ್' ಕೃತಿಯನ್ನು ಎಸ್. ನಾಗೇಶ್ ಕುಮಾರ್ ಬರೆದಿದ್ದಾರೆ. ಭಾನುವಾರ ಈ ಕೃತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆಗೊಳಿಸಿದರು.
ಗುಜರಾತ್ ಗಲಭೆಯ ನಂತರದ ರಾಜಕೀಯ ಬೆಳವಣಿಗೆಗಳನ್ನು ಕೃತಿಯಲ್ಲಿ ಮೆಲುಕು ಹಾಕಲಾಗಿದೆ. ಆಗ 'ಮನಾಲಿಯಲ್ಲಿ ವಿರಮಿಸುತ್ತಿದ್ದ' ವಾಜಪೇಯಿ ಅವರ ಅಭಿಪ್ರಾಯಕ್ಕೆ ವಿರುದ್ಧವಾಗಿ ಬಿಜೆಪಿಯ ಹಿರಿಯ ಮುಖಂಡರು ಮೋದಿ ಅವರಿಗೆ ಬೆಂಬಲವಾಗಿ ನಿಂತರು.
'ಮೋದಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸಿದರೆ, 'ತಪ್ಪನ್ನು ಒಪ್ಪಿಕೊಂಡಂತೆ ಆಗುತ್ತದೆ' ಹಾಗೂ ಇದು, ಪಕ್ಷದ ದೃಷ್ಟಿಯಿಂದ ಶಾಶ್ವತವಾಗಿ ಕಪ್ಪುಚುಕ್ಕೆಯಾಗಿ ಉಳಿಯಲಿದೆ' ಎಂದು ಆಗ ಬಿಜೆಪಿ ನಾಯಕತ್ವವು ಅಭಿಪ್ರಾಯಪಟ್ಟಿತ್ತು ಎಂದು ಕೃತಿಯಲ್ಲಿ ಉಲ್ಲೇಖಿಸಲಾಗಿದೆ.
ಆಗ ಪಕ್ಷದ ಸೂಚನೆಯಂತೆ ನಾಯ್ಡು ಅವರು ವಾಜಪೇಯಿ ವಿಶ್ರಾಂತಿ ಪಡೆಯುತ್ತಿದ್ದ ಮನಾಲಿಗೆ ದೌಡಾಯಿಸಿದ್ದರು. ಅವರ ಭೇಟಿಯ ಬಳಿಕ, 'ಮೋದಿ ಅವರು ರಾಜಧರ್ಮ ಪಾಲಿಸಬೇಕು' ಎಂಬ ಮಾತು ಹೇಳಿದ್ದು, ಮುಖ್ಯಮಂತ್ರಿಯಾಗಿ ಉಳಿಸಿಕೊಳ್ಳುವ ಪಕ್ಷದ ಮನೋಭಿಲಾಶೆಯನ್ನು ಎಂದು ಮೋದಿ ಅವರಿಗೆ ತಿಳಿಸಿದ್ದರು.
ಆ ಸಂದರ್ಭದಲ್ಲಿ ನಾಯ್ಡು ಅವರು ಬಿಜೆಪಿ ಅಧ್ಯಕ್ಷರಾಗಿದ್ದರು. ಬಿಕ್ಕಟ್ಟಿನ ಸಂದರ್ಭದಲ್ಲಿ ಮೋದಿ ಪರವಾಗಿ ನಿಂತಿದ್ದರು. ಇದೇ ನಿಲುವನ್ನು 130 ಸದಸ್ಯರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯು ಅನುಮೋದಿಸಿತ್ತು.
ಮನಾಲಿಯಿಂದ ದೆಹಲಿಗೆ ಮರಳಿದಾಗ ನಾಯ್ಡು ಅವರನ್ನು ಉದ್ದೇಶಿಸಿ ವಾಜಪೇಯಿ ಅವರು, 'ನನ್ನ ನಿಲುವನ್ನು ಪಕ್ಷದ ವೇದಿಕೆಯಲ್ಲಿ ವ್ಯಕ್ತಪಡಿಸಲು ಬಯಸುತ್ತೇನೆ' ಎಂದಿದ್ದರು. 'ಪ್ರಧಾನಮಂತ್ರಿಗೆ ತಮ್ಮ ನಿಲುವನ್ನು ಅಭಿವ್ಯಕ್ತಿಪಡಿಸುವ ಹಕ್ಕೂ ಇಲ್ಲವೇ? ಎಂದು ವಾಜಪೇಯಿ ಪ್ರಶ್ನಿಸಿದ್ದರು' ಎಂದು ಕೃತಿಯಲ್ಲಿ ಉಲ್ಲೇಖಿಸಲಾಗಿದೆ.
ಮುಖಂಡರ ಜೊತೆ ಚರ್ಚಿಸಿ ನಾಯ್ಡು ಬಳಿಕ ಕರೆದಿದ್ದ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲೂ ವಾಜಪೇಯಿ ಅವರು, ಮೋದಿ ಕುರಿತು ತಮ್ಮ ನಿಲುವು ಪುನರುಚ್ಚರಿಸಿದ್ದರು. ಆದರೆ, ಎಲ್.ಕೆ.ಅಡ್ವಾಣಿ, ಜಸ್ವಂತ್ ಸಿಂಗ್, ರಾಜನಾಥ್ ಸಿಂಗ್, ಅರುಣ್ ಜೇಟ್ಲಿ ಮತ್ತು ಸ್ವತಃ ನಾಯ್ಡು ಅವರು ಮೋದಿ ಸಿ.ಎಂ ಆಗಿ ಉಳಿಯಬೇಕು ಎಂದು ಪ್ರತಿಪಾದಿಸಿದ್ದರು.
ಸಭೆಯ ಕೊನೆಯಲ್ಲಿ ವಾಜಪೇಯಿ ಅವರು 'ಕ್ಯಾ ನರೇಂದ್ರ ಮೋದಿ ರಹೇಗಾ ಕಿ ಜಾಯೇಗಾ (ಮೋದಿ ಇರುತ್ತಾರೋ, ಹೋಗುತ್ತಾರೊ?') ಎಂದು ಮತ್ತೊಮ್ಮೆ ಪ್ರಶ್ನಿಸಿದ್ದರು. ಮೋದಿ ಉಳಿಯಬೇಕು ಎಂಬುದಕ್ಕೆ ಬಹುಮತ ವ್ಯಕ್ತವಾಗಿತ್ತು. ಅಂತಿಮವಾಗಿ, 'ಸರಿ. ಸಭೆಯ ನಿರ್ಧಾರವನ್ನು ಒಪ್ಪುತ್ತೇನೆ' ಎಂದು ವಾಜಪೇಯಿ ಹೇಳಿದ್ದರು.