ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ಅಪರ್ಣ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್ ಕಾಯಿಲೆಯಿಂದ ಅಪರ್ಣ ಮೃತಪಟ್ಟಿದ್ದಾರೆ. ಅಪರ್ಣ ತಮ್ಮ ಬನಶಂಕರಿ ನಿವಾಸದಲ್ಲಿ ಕೊನೆಯಿಸಿರೆಳೆದಿದ್ದಾರೆ.
ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ನಿಧನದ ಸುದ್ದಿ ಆಘಾತ ತಂದಿದೆ. ಅಪರ್ಣಾ ಅವರು ಕಳೆದ ಹಲವು ತಿಂಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಅಪರ್ಣಾ ಅವರಿಗೆ ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ್ದಾರೆ. ಬನಶಂಕರಿ 2ನೇ ಹಂತದ ದೇವಗಿರಿ ದೇವಸ್ಥಾನದ ಸಮೀಪದಲ್ಲಿರುವ ನಿವಾಸದಲ್ಲಿ ಅಪರ್ಣಾ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
ನಿರೂಪಕಿಯಾಗಿ ಮಾತ್ರವಲ್ಲದೇ ನಟಿಯಾಗಿ ಕೂಡ ಅವರು ಗುರುತಿಸಿಕೊಂಡಿದ್ದಾರೆ. ಸಿನಿಮಾ ಮತ್ತು ಸೀರಿಯಲ್ಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು. ಕಿರಿತೆರೆಯ ಅನೇಕ ಕಾರ್ಯಕ್ರಮಗಳನ್ನು ಅಪರ್ಣಾ ನಡೆಸಿಕೊಟ್ಟಿದ್ದರು. ಮಸಣದ ಹೂ ಸಿನಿಮಾದಲ್ಲೂ ಅಪರ್ಣ ನಟಿಸಿದ್ದರು. 1984 ರಲ್ಲಿ ಮಸಣದ ಹೂ ಸಿನಿಮಾ ತೆರೆಕಂಡಿತ್ತು.
ಯಾರು ಈ ಅಪರ್ಣಾ?
ಅಚ್ಚಕನ್ನಡವನ್ನು ಸ್ವಚ್ಛವಾಗಿ ಆಡುವಾಕೆಯೆಂದೇ ಹೆಸರು ಮಾಡಿರುವ ಅಪರ್ಣಾ ಆಕಾಶವಾಣಿ ಮತ್ತು ಕಿರುತೆರೆಯ ಕಲಾವಿದೆ. ಇವರ ಪೂರ್ತಿ ಹೆಸರು ಅಪರ್ಣಾ ವಸ್ತಾರೆ.
ಕಣಗಾಲ್ ಪುಟ್ಟಣ್ಣನವರ 'ಮಸಣದ ಹೂವು' ಚಿತ್ರದಿಂದ ಬೆಳಕಿಗೆ ಬಂದವರು. ಕನ್ನಡ ದೂರದರ್ಶನದ ಎಳವೆಯ ದಿವಸಗಳಿಂದ ಈ ತನಕವೂ ಕಾರ್ಯಕ್ರಮಗಳನ್ನು ನಿರೂಪಿಸುತ್ತ ಬೆಳೆದವರು, ಕಿರುತೆರೆಯನ್ನು ಬೆಳೆಸಿದವರು. ಈವರೆಗೆ ಒಂದೂವರೆ ಸಾವಿರಕ್ಕೂ ಹೆಚ್ಚು 'ಟೀವಿ'ಯೇತರ ದೇಖಾವೆ(ಷೋ)ಗಳನ್ನು ನಿರ್ವಹಿಸಿರುವವರು.
2004 ರಿಂದ ಮತ್ತೆ ಅಭಿನಯದತ್ತ ಗಮನ ಹರಿಸಿ, ಜನಪ್ರಿಯ ಧಾರಾವಾಹಿ 'ಮುಕ್ತ'ದ ಮುಖೇನ ಶೀಲಾ ಪ್ರಸಾದ್ ಪಾತ್ರವಾಗಿ ಮನೆ ಮಾತಾದವರು. 'ಪ್ರೀತಿಯಿಲ್ಲದ ಮೇಲೆ' ಧಾರಾವಾಹಿಯಲ್ಲಿ ಪಲ್ಲವಿಯಾಗಿ ಗುರುತಿಸಿಕೊಂಡವರು. ಸದ್ಯಕ್ಕೆ ಝೀ-ವಾಹಿನಿಯ 'ಜೋಗುಳ' ಸರಣಿಯಲ್ಲಿ ಪ್ರಧಾನಭೂಮಿಕೆಯಲ್ಲಿದ್ದಾರೆ.
See alsoರೇಷನ್ ಅಂಗಡಿಯಿಂದ ಅಕ್ಕಿ ಖರೀದಿಸಿ ಹೋಟೆಲ್ಗೆ ಮಾರುವ ಜಾಲ ಬಲೆಗೆ!
ಕನ್ನಡಪ್ರಭ ಸಾಪ್ತಾಹಿಕದ 'ಸಖೀಗೀತ'ದ ಅಂಕಣಕಾರ್ತಿ. 'ಪ್ರೀತಿಯಿಲ್ಲದ ಮೇಲೆ'ಯ ಪಲ್ಲವಿಯ ಪಾತ್ರಕ್ಕೆ ಶ್ರೇಷ್ಠನಟಿ ಪ್ರಶಸ್ತಿ, ನಿರೂಪಣೆಗಾಗಿ ಝೀ-ವಾಹಿನಿಯಿಂದ ಅತ್ಯುತ್ತಮ ಪ್ರಶಸ್ತಿ, ಕಿರುತೆರೆಯ ಮಾಧ್ಯಮದ 'ಈವರೆಗಿನ' ಕೆಲಸಕ್ಕೆ ಸರ್ವೋಚ್ಛ ಪ್ರಶಸ್ತಿಯನ್ನು ಪಡೆದಿದ್ದಾರೆ.
2005ರಲ್ಲಿ ಇವರು ಯುವ ವಾಸ್ತುಶಿಲ್ಪಿ ಹಾಗೂ ಕವಿ ನಾಗರಾಜ ವಸ್ತಾರೆ ಅವರನ್ನು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ. ಅಪರ್ಣ ಅವರ ತಂದೆ ಕೆ.ಎಸ್.ನಾರಾಯಣಸ್ವಾಮಿ ಕನ್ನಡಪ್ರಭ ಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿದ್ದರು.