ಮುಳ್ಳೇರಿಯ: ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಅಡೂರು ಬಾಲಕೃಷ್ಣ ತಂತ್ರಿಗಳ ಸ್ಮರಣಾರ್ಥವಾಗಿ ಕಾಸರಗೋಡು ಜಿಲ್ಲೆಯ ಕನ್ನಡ ವಿಭಾಗದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸ್ವಾತಂತ್ರ್ಯೋತ್ಸವ ಕನ್ನಡ ಕವನ ಸ್ಪರ್ಧೆ-2024ನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ತಾವು ರಚಿಸಿದ, ಎಲ್ಲೂ ಪ್ರಕಟವಾಗದ, ಉತ್ತಮವೆನಿಸುವ ಒಂದು ಕವನವನ್ನು ಸ್ಪಷ್ಟವಾಗಿ ಬರೆದು ಕಳುಹಿಸಬೇಕು. ಕವನದ ಜತೆಗೆ ಶಾಲೆಯ ಮುಖ್ಯಸ್ಥರ ದೃಢೀಕರಣ ಪತ್ರವನ್ನು ಇರಿಸಬೇಕು. ಪ್ರತ್ಯೇಕ ಹಾಳೆಯಲ್ಲಿ ವಿದ್ಯಾರ್ಥಿಯ ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ, ತರಗತಿ, ಶಾಲೆಯ ಹೆಸರು ಬರೆದು, ತಾವೇ ಬರೆದಿರುವ ಕವನವೆಂದು ಸ್ವಯಂ ದೃಢೀಕರಿಸಬೇಕು. ಯಾವುದೇ ಅನುವಾದಿತ ಕವನಗಳಿಗೆ ಆಸ್ಪದವಿಲ್ಲ. ಕೃತಿಚೌರ್ಯಕ್ಕೆ ಅವಕಾಶವಿಲ್ಲ. ಕವನಕ್ಕೆ ವಿಷಯ ನಿರ್ಬಂಧವಿಲ್ಲ. ಸಂಘಟಕರ ತೀರ್ಮಾನವೇ ಅಂತಿಮ. ಆಸಕ್ತರು 2024 ಆಗಸ್ಟ್ 15ರ ಮೊದಲು ತಲಪುವಂತೆ ಅಂಚೆಯ ಮೂಲಕ ಕವನಗಳನ್ನು ಪ್ರಶಾಂತ ರಾಜ ವಿ ತಂತ್ರಿ, ಅಡೂರು ಬಾಲಕೃಷ್ಣ ತಂತ್ರಿ ಸ್ಮಾರಕ ಕವನ ಸ್ಪರ್ಧೆ-24, ಅಡೂರು ಗ್ರಾಮ, ಉರುಡೂರು ಅಂಚೆ, ಕಾಸರಗೋಡು, 671543 ವಿಳಾಸಕ್ಕೆ ಕಳುಹಿಸಲು ಪ್ರಕಟಣೆ ತಿಳಿಸಿದೆ.