ಪೆರ್ಲ: ಮಾದಕವಸ್ತು ಬಳಕೆ ಮಾನವ ಜನಾಂಗದ ದು:ಸ್ಥಿತಿಗೆ ಮೂಲಕಾರಣವಾಗುತ್ತಿದ್ದು, ಈ ಪಿಡುಗಿನ ವಿರುದ್ಧ ವಿದ್ಯಾರ್ಥಿಗಳು ಧ್ವನಿಯೆತ್ತಬೇಕು ಎಂದು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಮುಕ್ಯ ಶಿಕ್ಷಕ ಎನ್. ಕೇಶವಪ್ರಕಾಶ್ ತಿಳಿಸಿದ್ದಾರೆ.
ಅವರು ಕಾಸರಗೋಡು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆ ಜಂಟಿಯಾಗಿ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತಾನಾಡಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಬಿ.ಎಂ ಸಮಾರಂಭ ಉದ್ಘಾಟಿಸಿದರು. ಬದಿಯಡ್ಕ ಅಬಕಾರಿ ರೇಂಜ್ ಕಚೇರಿಯ ಸಿವಿಲ್ ಅಬಕಾರಿ ಅಧಿಕಾರಿ ಜನಾರ್ದನ ಎನ್. ತರಗತಿ ನಡೆಸಿ, ಮಕ್ಕಳಲ್ಲಿ ಬೆಳೆದುಬರುತ್ತಿರುವ ಮಾದಕವಸ್ತು ಬಳಕೆಯ ಹವ್ಯಾಸ ಆರೋಗ್ಯಪೂರ್ಣ ಸಮಾಜಕ್ಕೆ ಸವಾಲು ತಂದೊಡ್ಡುವAತಾಗಿದೆ. ಎಳವೆಯಲ್ಲೇ ಮಾದಕ ದ್ರವ್ಯ ಸೇವನೆಯ ಜಾಲಕ್ಕೆ ಸಿಲುಕುವುದರಿಂದ ಅವರ ಭಾವೀ ಜೀವನ ಅಂಧಕಾರದತ್ತ ಸಾಗುತ್ತದೆ. ಇದಕ್ಕಾಗಿ ಮಾದಕದ್ರವ್ಯ ಎಂಬ ಮಾರಕ ವಿಷ ಪದಾರ್ಥದಿಂದ ದೂರ ನಿಲ್ಲುವುದರ ಜತೆಗೆ ಮಾದಕ ವಸ್ತು ಬಳಸದಿರುವಂತೆ ಹಿರಿಯರಿಗೆ ಬೋಧನೆ ನೀಡುವಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧೀಕಾರದ ಶಂಕರ್ ಸ್ವಾಗತಿಸಿದರು. ಹಿರಿಯ ಶಿಕ್ಷಕ ಡಾ. ಸತ್ಯನಾರಾಯಣ ಪುಣಿಂಚಿತ್ತಾಯ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಕೃಷ್ಣರಾಜ್ ವಂದಿಸಿದರು.