ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಸಹಯೋಗದೊಂದಿಗೆ ನಡೆದುಬರುತ್ತಿರುವ 'ಕರ್ನಾಟಕ ಸಂಭ್ರಮ - 50ರ ಸವಿ ನೆನಪು' ಕಾರ್ಯಕ್ರಮ ಜು. 20ರಂದು ಸಂಪನ್ನಗೊಳ್ಳಲಿದೆ.
ಇಂದು ಮಧ್ಯಾಹ್ನ 2 ಗಂಟೆಯಿಂದ ಸಿರಿಬಾಗಿಲು ಪ್ರತಿಷ್ಠಾನ ಪ್ರಕಾಶಿಸಿದ 7 ಗ್ರಂಥಗಳ ಕುರಿತಾದ ವಿಚಾರ ಸಂಕಿರಣ ನಡೆಯಲಿದೆ. ಶ್ರೀಧರ ಡಿ. ಎಸ್, ರಾಧಾಕೃಷ್ಣ ಉಳಿಯತ್ತಡ್ಕ, ರಾಧಾಕೃಷ್ಣ ಕಲ್ಚರ್, ಲಕ್ಷ್ಮಿ ಮಚ್ಚಿನ, ಡಾ. ನಾಗವೇಣಿ ಮಂಚಿ, ಕುಮಾರ ಸುಬ್ರಮಣ್ಯ ಮುಳಿಯಾಲ ಮತ್ತು ರಾಘವೇಂದ್ರ ಉಡುಪ ನೇರಳೆಕಟ್ಟೆ ಪುಸ್ತಕಗಳ ಬಗ್ಗೆ ವಿಮರ್ಶೆ ನಡೆಸುವರು. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು, ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅಧ್ಯಕ್ಷತೆ ವಹಿಸುವರು.
ಈ ಸಂದರ್ಭ ಪ್ರಸಂಗಕರ್ತ ಶ್ರೀಧರ ಡಿ.ಎಸ್, ಬಹುಭಾಷಾ ವಿಧ್ವಾಂಸ ಕೊಕ್ಕಡ ವೆಂಕಟ್ರಮಣ ಭಟ್, ಶಕುಂತಳಾ ಭಟ್ ಕುಂಚಿನಡ್ಕ ಅವರಿಗೆ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಂತರ ವೀರಮಣಿ ಕಾಳಗ, ಚಕ್ರವ್ಯೂಹ, ಸುದರ್ಶನ ವಿಜಯ, ರತಿಕಲ್ಯಾಣ ಎಂಬ ಯಕ್ಷಗಾಣ ಬಯಲಾಟ ನಡೆಯುವುದು.