ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಕಿವಿಗೆ ತಗುಲಿದ್ದು ಗುಂಡು ಎಂದು ತನಿಖಾ ಸಂಸ್ಥೆ ಎಫ್‌ಬಿಐ ಶುಕ್ರವಾರ ಖಚಿತಪಡಿಸಿದೆ.
ಘಟನೆ ಸಂದರ್ಭದಲ್ಲಿ ಟ್ರಂಪ್ ಅವರ ಬಲ ಕಿವಿಗೆ ತಗುಲಿದ್ದು ಏನು? ಎಂಬುದು ಅಧಿಕೃತವಾಗಿ ದೃಢಪಟ್ಟಿರಲಿಲ್ಲ.
ರೈಫಲ್‌ನಿಂದ ಹಾರಿದ ಗುಂಡು ಟ್ರಂಪ್ ಅವರ ಬಲ ಕಿವಿಗೆ ತಗುಲಿತ್ತು. ಸ್ವಲ್ಪದರಲ್ಲೇ ಅವರು ಪ್ರಾಣಾಪಾಯದಿಂದ ಪಾರಾದರು. ಗುಂಡು ಹಾರಿಸಿದ ವ್ಯಕ್ತಿಯನ್ನು ಕೊಲ್ಲಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಕರಣವನ್ನು ತನಿಖೆ ನಡೆಸಲು ಹಾಗೂ ಟ್ರಂಪ್ ವಿರುದ್ಧ ಷ್ಯಡ್ಯಂತ್ರ ನಡೆಸಲಾಗಿದೆಯೇ ಎಂಬುದನ್ನು ಪರಾಮರ್ಶಿಸಲು ಸ್ವತಂತ್ರ ತಜ್ಞರ ತಂಡವೊಂದನ್ನು ಅಮೆರಿಕದ ಆಂತರಿಕ ಭದ್ರತಾ ಕಾರ್ಯದರ್ಶಿ ಹಲೆಹ್ಯಾಂಡ್ರೊ ಮಯೋರ್ಕಸ್ ಅವರು ನೇಮಿಸಿದ್ದರು.
ಗುಂಡೇಟಿಗೆ ಒಳಗಾಗಿ ಗಾಯಗೊಂಡಿದ್ದ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರೀಕ್ಷೆಯಂತೆ ಚೇತರಿಸಿಕೊಂಡಿದ್ದಾರೆ ಎಂದು ಟ್ರಂಪ್‌ಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಡಾ. ರೋನಿ ಎಲ್. ಜಾಕ್ಸನ್ ತಿಳಿಸಿದ್ದಾರೆ.
'ಟ್ರಂಪ್ ಅವರ ಬಲ ಕಿವಿಗೆ 2 ಸೆಂ.ಮೀನಷ್ಟು ಅಗಲದ ಗಾಯವಾಗಿತ್ತು. ಆರಂಭದಲ್ಲಿ ರಕ್ತಸ್ರಾವ ಕಾಣಿಸಿಕೊಂಡಿತ್ತು, ಜತೆಗೆ ಕಿವಿಯ ಮೇಲ್ಬಾಗದಲ್ಲಿ ಊತವಿತ್ತು. ಆದರೆ ಈಗ ಊತ ಕಡಿಮೆಯಾಗಿದ್ದು, ಗಾಯವು ವಾಸಿಯಾಗಲು ಆರಂಭಿಸಿದೆ. ಗಾಯಕ್ಕೆ ಯಾವುದೇ ಹೊಲಿಗೆಗಳನ್ನು ಹಾಕಲಾಗಿಲ್ಲ' ಎಂದೂ ಅವರು ತಿಳಿಸಿದ್ದಾರೆ.
ಜುಲೈ 13 ರಂದು ಪೆನ್ಸಿಲ್ವೇನಿಯಾದಲ್ಲಿ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಟ್ರಂಪ್ ಅವರ ಮೇಲೆ ದಾಳಿ ನಡೆದಿತ್ತು. ಈ ವೇಳೆ ಪ್ರೇಕ್ಷಕನೊಬ್ಬ ಮೃತಪಟ್ಟು, ಟ್ರಂಪ್ ಸೇರಿದಂತೆ ಮೂವರು ಗಾಯಗೊಂಡಿದ್ದರು. ಹಂತಕ ಥಾಮಸ್ ಕ್ರೂಕ್‌ನನ್ನು ಸೀಕ್ರೇಟ್ ಸರ್ವಿಸ್ ಪೊಲೀಸರು ಅಂದೇ ಹತ್ಯೆ ಮಾಡಿದ್ದರು.