ನವದೆಹಲಿ/ಲಖನೌ: ಉತ್ತರ ಪ್ರದೇಶ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬುಧವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಪಕ್ಷದ ಸಂಘಟನೆಯ ವಿಚಾರವಾಗಿ ಅವರು ಪ್ರಧಾನಿಯವರಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಚೌಧರಿ ಮತ್ತು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಮಂಗಳವಾರ ಪ್ರತ್ಯೇಕವಾಗಿ ಭೇಟಿ ಮಾಡಿದ್ದರು. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ ನಂತರ, ಅಲ್ಲಿನ ಬಿಜೆಪಿ ಘಟಕದಲ್ಲಿ ಭಿನ್ನ ದನಿಗಳು ಕೇಳಿಬರುತ್ತಿರುವ ಹೊತ್ತಿನಲ್ಲಿ ಈ ಭೇಟಿ ನಡೆದಿದೆ.
ಮೌರ್ಯ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂಬುದು ಪಕ್ಷದ ಬಹುತೇಕರಿಗೆ ಗೊತ್ತಿದೆ. 'ಸಂಘಟನೆಯು ಸರ್ಕಾರಕ್ಕಿಂತಲೂ ದೊಡ್ಡದು, ಸಂಘಟನೆಗಿಂತ ಯಾರೂ ದೊಡ್ಡವರಲ್ಲ' ಎಂದು ಮೌರ್ಯ ಅವರು ಈಚೆಗೆ ಪಕ್ಷದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದುದು ಆದಿತ್ಯನಾಥ ಅವರನ್ನು ಉದ್ದೇಶಿಸಿ ರವಾನಿಸಿದ ಸಂದೇಶ ಎಂದು ಹಲವರು ಅರ್ಥೈಸಿದ್ದರು.
ಆದಿತ್ಯನಾಥ ಹಾಗೂ ನಡ್ಡಾ ಅವರ ಸಮ್ಮುಖದಲ್ಲಿಯೇ ಮೌರ್ಯ ಅವರು ಈ ಮಾತು ಆಡಿದ್ದರು. ಈಗ ಪಕ್ಷದ ವರಿಷ್ಠರು ಮೌರ್ಯ ಹಾಗೂ ಚೌಧರಿ ಅವರ ಜೊತೆ ನೇರವಾಗಿ ಮಾತುಕತೆ ನಡೆಸಿರುವುದು, ಪಕ್ಷದಲ್ಲಿನ ಅಸಮಾಧಾನಗಳನ್ನು ಸರಿಪಡಿಸುವ ಕ್ರಮ ಎನ್ನಲಾಗಿದೆ.
ಆದಿತ್ಯನಾಥ ಅವರ ಕಾರ್ಯಶೈಲಿಯು ಪಕ್ಷವು ಉತ್ತರ ಪ್ರದೇಶದಲ್ಲಿ ಹಿನ್ನಡೆ ಅನುಭವಿಸಿರುವುದಕ್ಕೆ ಒಂದು ಕಾರಣ ಎಂದು ಬಿಜೆಪಿಯ ಹಲವು ಮಂದಿ ಪ್ರಮುಖರು ತಮ್ಮ ಖಾಸಗಿ ಮಾತುಕತೆಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಆದರೆ, ಆದಿತ್ಯನಾಥ ಅವರು ಜನಪ್ರಿಯ ಮುಖ್ಯಮಂತ್ರಿ, ಅವರು ಪಕ್ಷದ ಹಿಂದುತ್ವ ಕಾರ್ಯಸೂಚಿಯನ್ನು ಬಹಳ ಗಟ್ಟಿಯಾಗಿ ಮುಂದಕ್ಕೆ ಒಯ್ಯುತ್ತಿದ್ದಾರೆ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಅವರಿಗೆ ಬಿಗಿಯಾದ ಹಿಡಿತವಿದೆ ಎಂದು ಅವರ ಬೆಂಬಲಿಗರು ಪ್ರತಿಪಾದಿಸುತ್ತಾರೆ.
ರಾಜ್ಯದ 10 ವಿಧಾನಸಭಾ ಸ್ಥಾನಗಳಿಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರುವುದು ಪಕ್ಷದ ಮುಂದೆ ಇರುವ ಆದ್ಯತೆಗಳಲ್ಲಿ ಒಂದು ಎಂದು ಮೂಲಗಳು ಹೇಳಿವೆ. ಈ ಉಪ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗವು ಶೀಘ್ರದಲ್ಲಿಯೇ ಘೋಷಿಸುವ ನಿರೀಕ್ಷೆ ಇದೆ.
ಸಂಘಟನೆಯಲ್ಲಿ ಬದಲಾವಣೆ?: 10 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಮುಗಿದ ನಂತರದಲ್ಲಿ, ಪಕ್ಷದ ರಾಜ್ಯ ಘಟಕದಲ್ಲಿ ಸಂಘಟನಾತ್ಮಕವಾಗಿ ಭಾರಿ ಪ್ರಮಾಣದ ಬದಲಾವಣೆಗಳನ್ನು ತರುವ ಸೂಚನೆಯನ್ನು ಪಕ್ಷದ ವರಿಷ್ಠರು ನೀಡಿದ್ದಾರೆ.
ಆದಿತ್ಯನಾಥ ಹಾಗೂ ಮೌರ್ಯ ಅವರ ಬಣಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕೆ ಇರಿಸಬೇಕು, ಮುಂಬರುವ ಉಪ ಚುನಾವಣೆಯ ಮೇಲೆ ಗಮನ ನೀಡಬೇಕು ಎಂದು ವರಿಷ್ಠರು ತಾಕೀತು ಮಾಡಿದ್ದಾರೆ ಎಂದು ಗೊತ್ತಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಪಕ್ಷವು ಹಿನ್ನಡೆ ಅನುಭವಿಸಿದ ಕಾರಣ ತಾವು ನೈತಿಕ ಹೊಣೆ ಹೊತ್ತು ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧವಿರುವುದಾಗಿ ಚೌಧರಿ ಅವರು ಪ್ರಧಾನಿಯವರಲ್ಲಿ ಹಾಗೂ ನಡ್ಡಾ ಅವರಲ್ಲಿ ಹೇಳಿದರು ಎನ್ನಲಾಗಿದೆ.
'ಉಪ ಚುನಾವಣೆಯಲ್ಲಿ ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ಇದುವರೆಗೆ ನಾವು ಹೊಂದಿದ್ದ ಸ್ಥಾನಗಳನ್ನು ಉಳಿಸಿಕೊಳ್ಳುವ ಕೆಲಸವನ್ನಾದರೂ ಮಾಡಬೇಕು' ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.