ವಾಷಿಂಗ್ಟನ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರನ್ನು 'ಪ್ರೆಸಿಡೆಂಟ್ ಪುಟಿನ್' ಮತ್ತು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು 'ವೈಸ್ ಪ್ರೆಸಿಡೆಂಟ್ ಟ್ರಂಪ್' ಎಂದು ಸಂಬೋಧಿಸುವ ಮೂಲಕ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಪೇಚಿಗೆ ಸಿಲುಕಿದ್ದಾರೆ.
ನ್ಯಾಟೊ ಕಾರ್ಯಕ್ರಮದಲ್ಲಿ ಝೆಲೆನ್‌ಸ್ಕಿ ಅವರನ್ನು ಭಾಷಣ ಮಾಡಲು ಬರಮಾಡಿಕೊಳ್ಳುವ ವೇಳೆಯಲ್ಲಿ ಬೈಡನ್ ಎಡವಟ್ಟು ಮಾಡಿದ್ದಾರೆ.
'ನಾನು ಉಕ್ರೇನ್ ಅಧ್ಯಕ್ಷರಿಗೆ ವೇದಿಕೆ ಬಿಟ್ಟುಕೊಡುತ್ತೇನೆ. ಅವರು ಅತ್ಯಂತ ಧೈರ್ಯಶಾಲಿ. ಸ್ವಾಗತ ಅಧ್ಯಕ್ಷ ಪುಟಿನ್' ಎಂದು ಹೇಳಿದ್ದಾರೆ.
ತಕ್ಷಣ ತಪ್ಪನ್ನು ತಿದ್ದಿಕೊಂಡ ಬೈಡನ್, ಅಧ್ಯಕ್ಷ ಪುಟಿನ್ ಅವರನ್ನು ಝೆಲೆನ್‌ಸ್ಕಿ ಸೋಲಿಸುತ್ತಾರೆ ಎಂದು ಹೇಳಿದ್ದಾರೆ.
ಇದಾದ ಬಳಿಕ ನಡೆದ ಮಗದೊಂದು ಸುದ್ದಿಗೋಷ್ಠಿಯಲ್ಲಿ ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷೆ ಟ್ರಂಪ್ ಎಂದು ಹೇಳುವ ಮೂಲಕ ತಬ್ಬಿಬ್ಬಾಗಿದ್ದಾರೆ.
ಒಟ್ಟಾರೆಯಾಗಿ ಅಮೆರಿಕದ ಅಧ್ಯಕ್ಷೀಯ ಚುನಾವಣಾ ಕಣದಲ್ಲಿರುವ 81 ವರ್ಷದ ಬೈಡನ್ ಅವರ ಆರೋಗ್ಯ ಸ್ಥಿತಿ, ಮನೋಬಲ ಮತ್ತು ಮುಂದಿನ ನಾಲ್ಕು ವರ್ಷ ದೇಶವನ್ನು ಆಳುವ ಸಾಮರ್ಥ್ಯದ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.