ಕಾಸರಗೋಡು: ಕೋಡ್ ಆನ್ ವೇಜಸ್ ಕೂಲಿ ಸಂಹಿತೆ ಕಟ್ಟಕಡೆಯ ಕೂಲಿ ಕಾರ್ಮಿಕರಿಗೂ ಖಾತ್ರಿಪಡಿಸುವ ಐತಿಹಾಸಿಕ ನಿರ್ಧಾರವಾಗಿದೆ ಎಂದು ಬಿಎಂಎಸ್ ರಾಷ್ಟ್ರೀಯ ಅಧ್ಯಕ್ಷ ಹಿರಣ್ಮಯ ಪಾಂಡ್ಯ ತಿಳಿಸಿದ್ದಾರೆ.
ಅವರು ಕಾಸರಗೋಡು ನಗರಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠೀಯಲ್ಲಿ ಮಾತನಾಡಿದರು.
ಮಹತ್ವದ ಬದಲಾವಣೆಗೆ ಕಾರಣವಾಗಲಿರುವ ನಾಲ್ಕು ಕಾರ್ಮಿಕ ಸಂಹಿತೆಗಳಲ್ಲಿ ವೇತನ ಸಂಹಿತೆ 2019 ಮತ್ತು ಸಾಮಾಜಿಕ ಭದ್ರತಾ ಸಂಹಿತೆ 2020 ಎಂಬ ಎರಡು ಕೋಡ್‍ಗಳು ಐತಿಹಾಸಿಕವಾಗಿದ್ದು, ಎರಡೂ ಕೋಡ್‍ಗಳನ್ನು ತುರ್ತಾಗಿ ಜಾರಿಗೆ ತರಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಕೈಗಾರಿಕಾ ಸಂಬಂಧಗಳ ಕೋಡ್ 2020 ಮತ್ತು ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ಕೋಡ್ 2020 ಎಂಬ ಎರಡು ಕೋಡ್‍ಗಳು ಅನೇಕ ಲೋಪದೋಷಗಳಿಂದ ಕೂಡಿದ್ದು, ಸಮಾಲೋಚನೆಗಳ ಮೂಲಕ ಮಾತ್ರ ಅದನ್ನು ಕಾರ್ಯಗತಗೊಳಿಸಬೇಕು. ದೇಶದ ಅಸಂಘಟಿತ ವಲಯದ 43 ಕೋಟಿ ಕಾರ್ಮಿಕರಿಗೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳನ್ನು ಸಂಹಿತೆ ಒದಗಿಸುವುದರಿಂದ ಸಾಮಾಜಿಕ ಭದ್ರತಾ ಸಂಹಿತೆಯನ್ನು ತುರ್ತಾಗಿ ಜಾರಿಗೊಳಿಸಬೇಕು. ಈ ಕುರಿತು ಕೇಂದ್ರ ಕಾರ್ಮಿಕ ಸಚಿವ ಮನ್ಸೂಕ್ ಮಾಂಡವ್ಯ ಅವರೊಂದಿಗೆ ಬಿಎಂಎಸ್ ಅಖಿಲ ಭಾರತ ಪದಾಧಿಕಾರಿಗಳ ನಿಯೋಗ ಮಾತುಕತೆ ನಡೆಸಿದೆ. ಪ್ರಸಕ್ತ ಕ್ರಮವಾಗಿ 21000 ಮತ್ತು 15000 ಇರುವ ಇಎಸ್‍ಐ ಮತ್ತು ಇಪಿಎಫ್ ಸಾಮಥ್ರ್ಯವನ್ನು ದ್ವಿಗುಣಗೊಳಿಸುವುದು, ಇಎಸ್‍ಐ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯಗಳನ್ನು ಹೆಚ್ಚಿಸುವುದು ಮತ್ತು ಕನಿಷ್ಠ ಪಿಎಫ್ ಪಿಂಚಣಿಯನ್ನು ರೂ.5ಸಾವಿರಕ್ಕೆ ಏರಿಸುವಂತೆ ಹಣಕಾಸು ಸಚಿವರಿಗೆ ಸಲ್ಲಿಸಲಗಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ. ಕೇಂದ್ರ ನೌಕರರ 8ನೇ ವೇತನ ಆಯೋಗವನ್ನು ಕೂಡಲೇ ರಚಿಸಬೇಕು ಹಾಗೂ ಅದೇ ರೀತಿ ಕೇರಳ ಸರ್ಕಾರಿ ನೌಕರರ 12ನೇ ವೇತನ ಆಯೋಗವನ್ನು ರಚಿಸಿ ಕೇರಳ ನೌಕರರು ತಡೆಹಿಡಿದಿರುವ ಡಿಎ ಬಾಕಿ ಸೇರಿದಂತೆ ಸವಲತ್ತುಗಳನ್ನು ತುರ್ತಾಗಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಬಿಎಂಎಸ್ ರಾಜ್ಯಾಧ್ಯಕ್ಷ ಶಿವಾಜಿ ಸುದರ್ಶನ್, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಸಿ.ಉಣ್ಣಿಕೃಷ್ಣನ್ ಉಣ್ಣಿತ್ತಾನ್, ರಾಜ್ಯ ಉಪಾಧ್ಯಕ್ಷ ವಕೀಲ ಪಿ ಮುರಳೀಧರನ್ ಸುದ್ದಿಗೋಷ್ಠೀಯಲ್ಲಿ ಉಪಸ್ಥಿತರಿದ್ದರು.