ಪಶ್ಚಿಮ ಬಂಗಾಳ: ಜೂ.30 ರಾಜ್ಯದ ಉತ್ತರ ದಿನಾಜ್‌ಪುರ ಜಿಲ್ಲೆಯ ಚೋಪ್ರಾದ ಮುಖ್ಯರಸ್ತೆಯಲ್ಲಿ 'ಅಕ್ರಮ ಸಂಬಂಧ'ದ ಆರೋಪದಡಿ ದಂಪತಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕ ಎಂದು ಹೇಳಲಾದ ವ್ಯಕ್ತಿ ವಿರುದ್ಧ ಇದೀಗ ಪಶ್ಚಿಮ ಬಂಗಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾರ್ವಜನಿಕರ ಮುಂದೆಯೇ ಮಹಿಳೆಗೆ ದೊಣ್ಣೆಯಿಂದ ಮನಬಂದಂತೆ ಥಳಿಸಿದ ವ್ಯಕ್ತಿಯನ್ನು ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕ ತಜ್ಮುಲ್ ಎಂದು ಬಿಜೆಪಿ ಹೇಳಿದ್ದು, ಘಟನೆಯ ವೀಡಿಯೊವನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇನ್ನು ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು, ಹಲ್ಲೆಗೈದ ವ್ಯಕ್ತಿಯ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ.
'ದಂಪತಿಯನ್ನು ಅಮಾನುಷವಾಗಿ ಥಳಿಸಿದ ವ್ಯಕ್ತಿಯನ್ನು ಬಂಧಿಸಲು ತನಿಖೆ ಚುರುಕುಗೊಳಿಸಿದ್ದೇವೆ ಮತ್ತು ಕೃತ್ಯದ ಹಿಂದಿರುವ ಕಾರಣವೇನು ಎಂಬುದನ್ನು ತ್ವರಿತವಾಗಿ ವಿಚಾರಣೆ ಮಾಡುತ್ತೇವೆ' ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿದ ಬಿಜೆಪಿಯ ಅಮಿತ್ ಮಾಳವೀಯ, 'ಇದು ಮಮತಾ ಅವರ ಆಡಳಿತದ ಕೊಳಕು ಮುಖ. ಮಹಿಳೆಯನ್ನು ನಿರ್ದಯವಾಗಿ ಥಳಿಸುವ ವೀಡಿಯೊದಲ್ಲಿರುವ ವ್ಯಕ್ತಿ, ತನ್ನ 'ಇನ್ಸಾಫ್' ಸಭೆಯ ಮೂಲಕ ತ್ವರಿತ ನ್ಯಾಯವನ್ನು ನೀಡುವಲ್ಲಿ ಪ್ರಸಿದ್ಧ ಮತ್ತು ಚೋಪ್ರಾ ಶಾಸಕ ಹಮೀದುರ್ ರೆಹಮಾನ್ ಆಪ್ತ' ಎಂದು ವಿಡಿಯೋ ಹಂಚಿಕೊಂಡಿದ್ದಾರೆ,