ಲಖನೌ: ಹಾಥರಸ್‌ನಲ್ಲಿ ನಡೆದ ಕಾಲ್ತುಳಿತ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಉತ್ತರ ಪ್ರದೇಶ ಸರ್ಕಾರಕ್ಕೆ ವರದಿ ನೀಡಿದ್ದು, ಎಲ್ಲಿಯೂ ಸ್ವಯಂ ಘೋಷಿತ ದೇವಮಾನವ ಭೋಲೆ ಬಾಬಾ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ, ಸತ್ಸಂಗ ಆಯೋಜಕರನ್ನು ದೂರಲಾಗಿದೆ.
ಎಸ್‌ಐಟಿ ಮಂಗಳವಾರ ನೀಡಿರುವ ವರದಿಯಲ್ಲಿ, ಯಾರ ಸತ್ಸಂಗದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರೋ, ಅವರ ಹೆಸರನ್ನೇ ಪ್ರಸ್ತಾಪಿಸಿಲ್ಲ ಹಾಗೂ ಅವರ ತಪ್ಪುಗಳ ಬಗ್ಗೆಯೂ ಪ್ರಸ್ತಾಪವಿಲ್ಲ. ಭೋಲೆ ಬಾಬಾ ಅವರು ತಮ್ಮ ಪ್ರವಚನ ಮುಗಿಸಿ ಹೊರಡುವ ವೇಳೆ, ಅವರ ಪಾದವನ್ನು ಮುಟ್ಟಲು ಭಕ್ತರು ಮುಗಿಬಿದ್ದಿದ್ದರು. ಈ ವೇಳೆ ನಡೆದ ದುರಂತದಲ್ಲಿ 121 ಜನರು ಮೃತಪಟ್ಟಿದ್ದರು.
'ಉಪವಿಭಾಗೀಯ ಮ್ಯಾಜಿಸ್ಟ್ರೇಟರ್, ಸರ್ಕಲ್ ಇನ್‌ಸ್ಪೆಕ್ಟರ್, ತಹಶೀಲ್ದಾರ್, ಕಂದಾಯ ನಿರೀಕ್ಷಕ ಹಾಗೂ ಹೊರ ಠಾಣೆ ಉಸ್ತುವಾರಿ ಈ ದುರಂತ ಸಂಭವಿಸುವುದಕ್ಕೆ ಕಾರಣರಾಗಿದ್ದಾರೆ. ಇವರು ತಮ್ಮ ಕರ್ತವ್ಯವನ್ನು ಸೂಕ್ತವಾಗಿ ನಿರ್ವಹಿಸಿಲ್ಲ' ಎಂದು ವರದಿಯಲ್ಲಿ ಹೇಳಲಾಗಿದ್ದು, ಇದರ ಆಧಾರದಲ್ಲಿ ಆರು ಮಂದಿಯನ್ನು ಅಮಾನತು ಮಾಡಲಾಗಿದೆ.
ವರದಿಯು 850 ಪುಟಗಳಷ್ಟಿದೆ. ಸತ್ಸಂಗ ಕಾರ್ಯಕ್ರಮ ನಡೆಸಲು ಅನುಮತಿ ಪಡೆಯುವ ವೇಳೆ ಆಯೋಜಕರು, ಕಾರ್ಯಕ್ರಮಕ್ಕೆ ಎಷ್ಟು ಮಂದಿ ಬರಲಿದ್ದಾರೆ ಎನ್ನುವುದನ್ನು ಅಧಿಕಾರಿಗಳಿಗೆ ತಿಳಿಸಿರಲಿಲ್ಲ. ಜೊತೆಗೆ, 'ಕಾರ್ಯಕ್ರಮಕ್ಕೆ ಅನುಮತಿ ನೀಡುವಾಗ ಅಧಿಕಾರಿಗಳು ವಿಧಿಸಿದ್ದ ಷರತ್ತುಗಳನ್ನೂ ಪಾಲಿಸಿಲ್ಲ. ದೊಡ್ಡ ಸಂಖ್ಯೆಯಲ್ಲಿ ಭಕ್ತರನ್ನು ಸತ್ಸಂಗಕ್ಕೆ ಆಹ್ವಾನಿಸಲಾಗಿತ್ತು. ಆದರೆ, ಅದಕ್ಕೆ ತಕ್ಕ ವ್ಯವಸ್ಥೆಯನ್ನು ಮಾಡಿಕೊಂಡಿರಲಿಲ್ಲ' ಎಂದು ವರದಿಯಲ್ಲಿ ಹೇಳಲಾಗಿದೆ.
ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಪರಿಶೀಲನೆ ನಡೆಸಲು ಬಂದ ಪೊಲೀಸರನ್ನು ತಡೆಯಲಾಗಿತ್ತು ಎಂದೂ ಹೇಳಲಾಗಿದೆ. 'ಬ್ಯಾರಿಕೇಡ್ ಹಾಕಿರಲಿಲ್ಲ. ಘಟನಾ ಸ್ಥಳದಲ್ಲಿ ಜನರ ಸುಗಮ ಸಂಚಾರಕ್ಕಾಗಿ ಯಾವುದೇ ಮಾರ್ಗಗಳನ್ನು ಸೂಚಿಸಿರಲಿಲ್ಲ. ಘಟನೆ ನಡೆಯುತ್ತಿದ್ದಂತೆಯೇ ಆಯೋಜಕರು ಘಟನಾ ಸ್ಥಳದಿಂದ ಓಡಿ ಹೋಗಿದ್ದಾರೆ' ಎಂದು ವರದಿಯಲ್ಲಿ ಹೇಳಲಾಗಿದೆ.
ಸ್ಥಳೀಯ ಆಡಳಿತವು ಕಾರ್ಯಕ್ರಮವನ್ನು ಗಂಭೀರವಾಗಿಯೇ ಪರಿಗಣಿಸಲಿಲ್ಲ ಮತ್ತು ಸತ್ಸಂಗಕ್ಕೆ ಎಷ್ಟು ಜನರು ಆಗಮಿಸಬಹುದು ಎಂದು ಅಂದಾಜು ಮಾಡುವಲ್ಲಿಯೂ ಆಡಳಿತ ಸೋತಿದೆ. 'ಕಾರ್ಯಕ್ರಮ ನಡೆಯುವ ಸ್ಥಳವನ್ನೇ ಪರಿಶೀಲಿಸದೆ, ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿತ್ತು' ಎಂಬ ಮಾಹಿತಿ ವರದಿಯಲ್ಲಿದೆ.
'ಪಿತೂರಿ ಕಾರಣ':
ಈ ಮಧ್ಯೆ, ದುರಂತ ಸಂಭವಿಸಲು ಯಾವುದೋ 'ಪಿತೂರಿ' ಕಾರಣ ಇರಬಹುದು ಎಂಬುದಾಗಿಯೂ ಉಲ್ಲೇಖಿಸಲಾಗಿದೆ. ಆದ್ದರಿಂದ, 'ಪಿತೂರಿ' ಕುರಿತು ಸಂಪೂರ್ಣ ತನಿಖೆಯಾಗಬೇಕು ಎಂದು ವರದಿ ಹೇಳಿದೆ.
ಬಾಬಾ ಅವರ ಪಾದವನ್ನು ಮುಟ್ಟಲು ನೂಕುನುಗ್ಗಲು ಆಗಿದ್ದಕ್ಕಾಗಿಯೇ ದುರಂತ ಸಂಭವಿಸಿದೆ ಎನ್ನುವ ಆರೋಪವನ್ನು ಬಾಬಾ ಅವರ ವಕೀಲ ಎ.ಪಿ. ಸಿಂಗ್ ಅವರು ತಳ್ಳಿಹಾಕಿದ್ದಾರೆ. 'ಬಾಬಾ ಅವರು ಎಂದಿಗೂ ಭಕ್ತರಿಗೆ ತಮ್ಮ ಪಾದ ಮುಟ್ಟುವುದಕ್ಕೆ ಅನುಮತಿಯನ್ನೇ ನೀಡುತ್ತಿರಲಿಲ್ಲ. ಕೆಲವು ಪುಂಡರು ಸತ್ಸಂಗ ನಡೆಯುವಾಗ ಯಾವುದೋ ವಿಷಕಾರಿ ದ್ರವವನ್ನು ಸಿಂಪಡಿಸಿದ್ದಾರೆ. ಇದರಿಂದಲೇ ಕಾಲ್ತುಳಿತ ಸಂಭವಿಸಿದೆ' ಎಂದು ದೂರಿದ್ದಾರೆ.
128 ಪ್ರತ್ಯಕ್ಷ್ಯದರ್ಶಿಗಳ ಹೇಳಿಕೆಗಳನ್ನು ಪಡೆದುಕೊಂಡು ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಕೆಲವು ಮೂಲಗಳು ಹೇಳಿವೆ. ಎಸ್‌ಐಟಿ ವರದಿಯು ಇನ್ನುವರೆಗೂ ಬಹಿರಂಗಗೊಂಡಿಲ್ಲ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅನುಪಮ್ ಕುಲಶ್ರೇಸ್ಥಾ ಮತ್ತು ಅಲಿಗಢ ವಿಭಾಗೀಯ ಆಯುಕ್ತೆ ಚೈತ್ರಾ ವಿ. ಅವರು ಎಸ್‌ಐಟಿ ತಂಡದಲ್ಲಿ ಇದ್ದರು.
ಮೂಲಗಳ ಪ್ರಕಾರ, ಎಸ್‌ಐಟಿ ವರದಿಯನ್ನು ನ್ಯಾಯಾಂಗ ತನಿಖೆ ನಡೆಸುತ್ತಿರುವ ತಂಡಕ್ಕೆ ನೀಡಲಾಗುತ್ತದೆ. ನ್ಯಾಯಾಂಗ ತನಿಖೆ ನಡೆಸುತ್ತಿರುವ ತಂಡದಲ್ಲಿ ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ಶ್ರೀವಾಸ್ತವ್ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಹೇಮಂತ್ ರಾವ್ ಇದ್ದಾರೆ.
'ಸತ್ಸಂಗ ಆಯೋಜಕರೇ ಈ ದುರಂತಕ್ಕೆ ಕಾರಣ. 80 ಸಾವಿರ ಜನರಿಗೆ ಅನುಮತಿ ನೀಡಲಾಗಿತ್ತು. ಆದರೆ, 2.5 ಲಕ್ಷ ಜನರು ಕಾರ್ಯಕ್ರಮಕ್ಕೆ ಬಂದಿದ್ದರು' ಎಂದು ಪೊಲೀಸರು ಈ ಹಿಂದೆ ದೂರಿದ್ದರು. ಇಲ್ಲಿಯವರೆಗೆ ಪ್ರಕರಣ ಸಂಬಂಧ 9 ಮಂದಿಯನ್ನು ಬಂಧಿಸಲಾಗಿದೆ.
'ಕಾರ್ಯಕ್ರಮಗಳಲ್ಲಿ ಜನರು ಪಾಲ್ಗೊಳ್ಳುವ ನಿರ್ದಿಷ್ಟ ಸಂಖ್ಯೆಯನ್ನು ಮರೆಮಾಚಿ, ಕಾರ್ಯಕ್ರಮ ಆಯೋಜನೆಗೆ ಅನುಮತಿ ಪಡೆದುಕೊಂಡಿರುವುದು ಇದೇ ಮೊದಲೇನಲ್ಲ. ಕೋವಿಡ್ ಕಾಲದಲ್ಲಿ, ಅಂದರೆ 2022ರಲ್ಲಿ ರ್‍ಯಾಲಿ ನಡೆಸಲು ಭೋಲೆ ಬಾಬಾ ಅವರು ಅನುಮತಿ ಪಡೆದುಕೊಂಡಿದ್ದರು. 50 ಜನ ಸೇರುವುದಾಗಿ ಹೇಳಿದ್ದರು. ಆದರೆ, ಆ ರ್‍ಯಾಲಿಯಲ್ಲಿ 50 ಸಾವಿರ ಮಂದಿ ಪಾಲ್ಗೊಂಡಿದ್ದರು' ಎಂದು ಎನ್‌ಡಿಟಿವಿ ವರದಿ ಮಾಡಿದೆ.