ಮುಂಬೈ: 'ಯಾವುದು ಪುಣ್ಯ, ಯಾವುದು ಪಾಪ ಎನ್ನುವುದನ್ನು ಹಿಂದೂ ಧರ್ಮದಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಧರ್ಮದಲ್ಲಿ ಗೋಹತ್ಯೆಯು ಅತ್ಯಂತ ಪಾಪದ ಕೆಲಸ. ಅದಕ್ಕಿಂತ ಪಾಪದ ಕೆಲಸ ವಿಶ್ವಾಸದ್ರೋಹ. ಉದ್ಧವ್ ಠಾಕ್ರೆ ಅವರಿಗೆ ವಿಶ್ವಾಸದ್ರೋಹವಾಗಿದೆ' ಎಂದು ಉತ್ತರಾಖಂಡದ ಜ್ಯೋತಿರ್ ಪೀಠದ ಶಂಕರಾಚಾರ್ಯ, ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಸೋಮವಾರ ಅಭಿಪ್ರಾಯಪಟ್ಟರು.
ಶಿವಸೇನಾ (ಉದ್ಧವ್ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಸ್ವಾಮೀಜಿ ಅವರನ್ನು ತಮ್ಮ ನಿವಾಸಕ್ಕೆ ಪಾದಪೂಜೆಗಾಗಿ ಆಹ್ವಾನಿಸಿದ್ದರು. ಪಾದಪೂಜೆ ಕಾರ್ಯಕ್ರಮಗಳು ಮುಗಿದ ಬಳಿಕ, ಪತ್ರಕರ್ತರ ಪ್ರಶ್ನೆಗಳಿಗೆ ಸ್ವಾಮೀಜಿ ಪ್ರತಿಕ್ರಿಯಿಸಿದರು.
'ಉದ್ಧವ್ ಅವರಿಗೆ ವಿಶ್ವಾಸಘಾತವಾಗಿರುವ ಬಗ್ಗೆ ನಮಗೆ ದುಃಖವಿದೆ, ಮಹಾರಾಷ್ಟ್ರದ ಜನರಿಗೂ ದುಃಖವಿದೆ. ಜನರಿಗೆ ಇರುವ ದುಃಖ ಎಷ್ಟು ಎನ್ನುವುದನ್ನು ಅವರು ಲೋಕಸಭಾ ಚುನಾವಣೆಯಲ್ಲಿಯೇ ತೋರಿಸಿದ್ದಾರೆ. ಉದ್ಧವ್ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗುವವರೆಗೂ ಈ ದುಃಖ ಅಳಿಯುವುದಿಲ್ಲ' ಎಂದರು.
ಮೋದಿ ಶತ್ರುವಲ್ಲ: 'ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಶತ್ರುವಲ್ಲ. ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭದಲ್ಲಿ ಅವರು ನಮಗೆ ನಮಿಸಿದರು. ನಮ್ಮ ಬಳಿ ಬರುವ ಎಲ್ಲರನ್ನೂ ಆಶೀರ್ವದಿಸುವುದು ನಮ್ಮ ಕರ್ತವ್ಯ. ನಾವು ಅವರ ಸುಖಾಭಿಲಾಷಿ. ಅವರ ಒಳ್ಳೆಯದಕ್ಕೆ ನಾವು ಮಾತನಾಡುತ್ತೇವೆ. ಅವರು ತಪ್ಪು ಮಾಡಿದರೂ ನಾವು ಆ ತಪ್ಪನ್ನು ತೋರಿಸುತ್ತೇವೆ' ಎಂದರು.
ಅಯೋಧ್ಯೆಯಲ್ಲಿ ರಾಮ ಮಂದಿರ ಪೂರ್ಣ ನಿರ್ಮಾಣವಾಗದೇ, ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡುವುದನ್ನು ಸ್ವಾಮೀಜಿ ವಿರೋಧಿಸಿದ್ದರು. ಈ ಬಗ್ಗೆ ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡಿದ್ದರು. ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ರಾಮ ಮಂದಿರ ಟ್ರಸ್ಟ್ ಆಹ್ವಾನ ನೀಡಿದ್ದರೂ ಸ್ವಾಮೀಜಿ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.
ಯಾರು ವಿಶ್ವಾಸದ್ರೋಹ ಮಾಡುತ್ತಾರೋ ಅವರು ಹಿಂದೂ ಆಗಿರಲು ಸಾಧ್ಯವಿಲ್ಲ. ವಿಶ್ವಾಸಘಾತವನ್ನು ಯಾರು ತಡೆದುಕೊಳ್ಳುತ್ತಾರೋ ಅವರೇ ನಿಜವಾದ ಹಿಂದೂ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಉತ್ತರಾಖಂಡದ ಜ್ಯೋತಿರ್ ಪೀಠದ ಶಂಕರಾಚಾರ್ಯ
'ಹಿಮಾಲಯದಲ್ಲಿಯೇ ಕೇದಾರವಿದೆ'
'ಹಿಮಾಲಯದ ತಪ್ಪಲಿನಲ್ಲಿಯೇ ಕೇದಾರವಿದೆ. ಇದನ್ನು ಶಿವಪುರಾಣದಲ್ಲಿಯೇ ಉಲ್ಲೇಖಿಸಲಾಗಿದೆ. ಹೀಗಿದ್ದ ಮೇಲೆ ಕೇದಾರನಾಥ ದೇವಸ್ಥಾನವನ್ನು ದೆಹಲಿಗೆ ಯಾಕೆ ಸ್ಥಳಾಂತರಿಸಬೇಕು. ಶಿವನಿಗೆ ಹಲವು ನಾಮಗಳಿವೆ. ಯಾವ ಹೆಸರಿನಲ್ಲಾದರೂ ದೇವಸ್ಥಾನ ನಿರ್ಮಿಸಲಿ. ಆದರೆ ಕೇದಾರನಾಥವನ್ನು ದೆಹಲಿಗೆ ಸ್ಥಳಾಂತರಿಸಲು ಬಿಡುವುದಿಲ್ಲ' ಎಂದು ದೆಹಲಿಯಲ್ಲಿ ಕೇದಾರನಾಥ ದೇವಾಲಯ ನಿರ್ಮಾಣವಾಗುತ್ತಿರುವುದರ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸ್ವಾಮೀಜಿ ಉತ್ತರಿಸಿದರು. 'ಇವೆಲ್ಲವೂ ರಾಜಕೀಯ ಕಾರಣಗಳಿಗೆ ಆಗುತ್ತಿದೆ. ಇದು ನಮಗೆ ತಿಳಿದಿದೆ. ಜನರಲ್ಲಿ ಭ್ರಮೆ ಬಿತ್ತುತ್ತಿದ್ದೀರೇ? ಕೇದಾರನಾಥ ದೇವಾಲಯದ 228 ಕೆ.ಜಿ ಚಿನ್ನ ಕಳವಾಗಿದೆ. ಈ ಬಗ್ಗೆ ಯಾಕಿನ್ನೂ ತನಿಖೆ ಆರಂಭಗೊಂಡಿಲ್ಲ. ಅಲ್ಲಿ ಹಗರಣ ಮಾಡಿ ಮುಗಿಯಿತು. ಈಗ ದೆಹಲಿಯಲ್ಲಿ ದೇವಸ್ಥಾನ ನಿರ್ಮಿಸಿ ಇಲ್ಲಿಯೂ ಹಗರಣ ಮಾಡಲು ಹೊರಟಿದ್ದೀರೇ?' ಎಂದು ಕಿಡಿಕಾರಿದರು. 'ಚಿನ್ನ ಕಳವಾದ ಕುರಿತು ಮಾಧ್ಯಮಗಳು ಯಾಕೆ ಪ್ರಶ್ನೆ ಕೇಳುತ್ತಿಲ್ಲ' ಎಂದೂ ಸ್ವಾಮೀಜಿ ಪತ್ರಕರ್ತರನ್ನು ಪ್ರಶ್ನಿಸಿದರು.