ಉಪ್ಪಳ: ನಾಗರ ಹಾವು ಕಡಿದ ಪರಿಣಾಮ ಗೃಹಿಣಿ ಸಾವಿಗೀಡಾಗಿದ್ದಾರೆ. ಪೈವಳಿಕೆ ಪಂಚಾಯಿತಿಯ ಕುರುಡಪದವು ನಿವಾಸಿ ದಿ. ಮಾಂಕು ಎಂಬವರ ಪತ್ನಿ ಚೋಮು(64)ಮೃತಪಟ್ಟ ಮಹಿಳೆ.
ಬುಧವಾರ ತಡರಾತ್ರಿ ಮನೆಯೊಳಗೆ ನಿದ್ರಿಸುತ್ತಿದ್ದ ಮಹಿಳೆ ಕೈಗೆ ಏನೋ ಕಡಿದ ಅನುಭವವಾಗಿದ್ದು, ತಕ್ಷಣ ಕೊಠಡಿಯೊಳಗೆ ಹುಡುಕಾಡಿದರೂ ಏನೂ ಪತ್ತೆಯಾಗಿರಲಿಲ್ಲ.
ಈ ಬಗ್ಗೆ ಚೋಮು ಅವರು ತನ್ನ ಸಹೋದರನಿಗೆ ಮಾಹಿತಿ ನೀಡಿದ್ದು, ಅವರು ನೋಡಿದಾಗ ಚೋಮು ಅವರ ಕೈಯಲ್ಲಿ ರಕ್ತದ ಕಲೆ ಕಂಡುಬಂದಿತ್ತು. ಹಾವಿನ ಕಡಿತವೆಂದು ಸಂಶಯದಿಂದ ಮನೆಯ ಇತರ ಕೊಠಡಿಯಲ್ಲಿ ಹುಡುಕಾಡಿದಾಗ ನಾಗರ ಹಾವೊಂದು ಕೊಠಡಿ ಸಂದಿಯಲ್ಲಿರುವುದು ಕಂಡುಬಂದಿತ್ತು. ತಕ್ಷಣ ಇವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ಸಾಗಿಸಿದರೂ, ಹಾದಿ ಮಧ್ಯೆ ಸಾವು ಸಂಭವಿಸಿದೆ. ಚೋಮು ಅವರಿಗೆ ಕಡಿದ ನಾಗರಹಾವನ್ನು ಉರಗ ತಜ್ಞರ ಸಹಾಯದಿಂದ ಸೆರೆಹಿಡಿದು ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.