ಮುಂಬೈ: 'ದೇಶದಿಂದ ತಲೆಮರೆಸಿಕೊಂಡಿರುವ ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂನನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ಭಯೋತ್ಪಾದಕ ಎಂದು ಘೋಷಿಸಲಾಗಿದೆ' ಎಂದು ಬಾಂಬೆ ಹೈಕೋರ್ಟ್ ಪುನರುಚ್ಚರಿಸಿದ್ದು, ಅವರ ಜೊತೆ ಅಥವಾ ಗುಂಪಿನೊಂದಿಗೆ ಗುರುತಿಸಿಕೊಂಡಿರುವವರಿಗೂ ಇದೇ ಕಾಯ್ದೆ ಅನ್ವಯ ಮಾಡಲಾಗದು' ಎಂದು ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಭಾರತಿ ಡಾಂಗರೆ, ಮಂಜುಶ್ರೀ ದೇಶಪಾಂಡೆ ನೇತೃತ್ವದ ವಿಭಾಗೀಯ ಪೀಠವು ಜುಲೈ 11ರಂದು ಪ್ರಕಟಿಸಿದ ತೀರ್ಪಿನಲ್ಲಿ ಹೀಗೆ ತಿಳಿಸಿದ್ದು, 2022ರ ಆಗಸ್ಟ್ ತಿಂಗಳಲ್ಲಿ ಉಗ್ರ ನಿಗ್ರಹ ಪಡೆಯು ಯುಎಪಿಎ ಅಡಿ ಬಂಧಿಸಿದ್ದ ಇಬ್ಬರಿಗೂ ಜಾಮೀನು ನೀಡಿದೆ.
ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಸದಸ್ಯರಾದ ಫೈಜ್ ಭಿವಂಡಿವಾಲಾ, ಪರ್ವೇಜ್ ವೈದ್‌ನನ್ನು 600 ಗ್ರಾಂ ಗಾಂಜಾ ಹೊಂದಿದ್ದ ಆರೋಪದ ಅಡಿಯಲ್ಲಿ ಬಂಧಿಸಲಾಗಿತ್ತು. ಇಬ್ಬರ ವಿರುದ್ಧವೂ ಯುಎಪಿಎ, ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ- 1985ರ (ಎನ್‌ಡಿಪಿಎಸ್) ಅಡಿ ಪ್ರಕರಣ ದಾಖಲಿಸಲಾಗಿತ್ತು.
'2019ರ ಸೆ.4ರಂದು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ಪ್ರಕಾರ, 'ದಾವೂದ್ ಇಬ್ರಾಹಿಂ ಕಸ್ಕರ್‌ನನ್ನು ಯುಎಪಿಎ ಅಡಿಯಲ್ಲಿ ಭಯೋತ್ಪಾದಕ ಎಂದು ಘೋಷಿಸಲಾಗಿದೆ. ಈ ಕಾಯ್ದೆಯು ವ್ಯಕ್ತಿ ಹಾಗೂ ಸಂಘಟನೆಗಳು ನಡೆಸುವ ಭಯೋತ್ಪಾದಕ ಕೃತ್ಯಗಳನ್ನು ಪ್ರತ್ಯೇಕಿಸುತ್ತದೆ. ಸೆಕ್ಷನ್ 20ರ ಅನ್ವಯ, ಆತನ ಸಹಚರರಿಗೂ ಈ ಕಾಯ್ದೆ ಅನ್ವಯ ಮಾಡಲು ಸಾಧ್ಯವಿಲ್ಲ' ಎಂದು ತನ್ನ ತೀರ್ಪಿನಲ್ಲಿ ತಿಳಿಸಿದೆ. ಈ ಕುರಿತು ಎಟಿಎಸ್ ಅಧಿಕಾರಿಗಳಿಗೂ ತಿಳಿಸುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್.ವಿ.ಗವಂದ್ ಅವರಿಗೆ ಹೈಕೋರ್ಟ್ ಸೂಚಿಸಿತು.