ನವದೆಹಲಿ: ರೈತರು ಹಾಗೂ ಸರ್ಕಾರದ ನಡುವೆ ವಿಶ್ವಾಸದ ಕೊರತೆ ಇದೆ ಎಂಬುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ಪ್ರತಿಭಟನಾನಿರತ ರೈತರ ಬೇಡಿಕೆಗಳಿಗೆ ಪರಿಹಾರ ಹುಡುಕಬಲ್ಲ ಸಮರ್ಥ ವ್ಯಕ್ತಿಗಳನ್ನೊಳಗೊಂಡ ಸಾಂವಿಧಾನಿಕ ಸ್ವತಂತ್ರ ಪೀಠ ರಚಿಸುವಂತೆ ಸರ್ಕಾರಕ್ಕೆ ಬುಧವಾರ ನಿರ್ದೇಶನ ನೀಡಿದೆ.

ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠದಲ್ಲಿದ್ದ ನ್ಯಾ. ಸೂರ್ಯಕಾಂತ್ ಅವರು, ಸರ್ಕಾರ ಮತ್ತು ರೈತರ ನಡುವೆ ವಿಶ್ವಾಸ ಮೂಡಿಸಬಲ್ಲ 'ತಟಸ್ಥ ತೀರ್ಪುಗಾರರ' ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
'ರೈತರನ್ನು ತಲುಪಲು ಕೆಲವು ಕ್ರಮಗಳನ್ನು ನೀವು ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಅವರೇಕೆ ದೆಹಲಿಗೆ ಬರಲು ಬಯಸುತ್ತಿದ್ದರು? ನೀವು ಸಚಿವರನ್ನು ಕಳುಹಿಸುತ್ತಿದ್ದೀರಿ. ಉತ್ತಮ ಉದ್ದೇಶದ ಹೊರತಾಗಿಯೂ ವಿಶ್ವಾಸದ ಕೊರತೆ ಇದೆ' ಎಂದು ನ್ಯಾ. ದೀಪಂಕರ್ ದತ್ತಾ ಮತ್ತು ನ್ಯಾ. ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠ ಸರ್ಕಾರಕ್ಕೆ ಹೇಳಿದೆ.
'ವಾರದೊಳಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲಿಯವರೆಗೆ ಎರಡೂ ಕಡೆಯವರು ಶಂಭು ಗಡಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು' ಎಂದು ನಿರ್ದೇಶಿಸಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆಬ್ರುವರಿ 13ರಂದು 'ದೆಹಲಿ ಚಲೊ' ಹೊರಟಿದ್ದ ರೈತರನ್ನು ಅಂಬಾಲ ಬಳಿಯ ಶಂಭು ಗಡಿಯಲ್ಲಿ ತಡೆಯಲಾಗಿದೆ. ಗಡಿಯಲ್ಲಿ ಹಾಕಲಾಗಿರುವ ಬ್ಯಾರಿಕೇಡ್‌ಗಳನ್ನು ವಾರದೊಳಗೆ ತೆರವು ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿರುವುದನ್ನು ಪ್ರಶ್ನಿಸಿ, ಹರಿಯಾಣ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.