ಮುಳ್ಳೇರಿಯ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಾಸರಗೋಡು ತಾಲೂಕಿನ ಕಾರಡ್ಕ ವಲಯದ ಮಹಾಸಭೆ ಕಾಸರಗೋಡು ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ ಅವರ ಅಧ್ಯಕ್ಷತೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರಡ್ಕ ವಲಯ ಕಚೇರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಜನ ಜಾಗೃತಿ ವೇದಿಕೆ ಕಾರಡ್ಕ ವಲಯಕ್ಕೆ ನೂತನವಾಗಿ ಆಯ್ಕೆಯಾದ ಸದಸ್ಯರಾದ ಚನಿಯಪ್ಪ ನಾಯ್ಕ ಮತ್ತು ಗಂಗಾಧರ ಮಣಿಯಾಣಿ ಅವರನ್ನು ವಲಯ ಅಧ್ಯಕ್ಷರಾದ ಬಾಲಕೃಷ್ಣ ರೈ ಗೌರವಿಸಿದರು. ಬಳಿಕ ಕಾರಡ್ಕ ವಲಯಕ್ಕೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ವಲಯ ಅಧ್ಯಕ್ಷರಾಗಿ ಸಂಜೀವ ಶೆಟ್ಟಿ ಮೊಟ್ಟೆಕುಂಜ ಅವರನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷ ಸಂಜೀವ ಶೆಟ್ಟಿ ಅವರು ಈ ಸಂದರ್ಭ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ವೇದಿಕೆಯ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಜನರ ಪ್ರಶಂಸೆಗೆ ಪಾತ್ರವಾಗಿದೆ. ಜನರಿಗೆ ಜಾಗೃತಿ ಮೂಡಿಸುವಂತಹ ಪೂಜ್ಯರಾದ ಡಾ| ವೀರೇಂದ್ರ ಹೆಗ್ಗಡೆಯವರ ಹಲವು ಕನಸುಗಳು ಈ ಮೂಲಕ ನನಸಾಗಲಿದೆ. ಹಲವು ಕಾರ್ಯಕ್ರಮಗಳಿಂದ ಜನರಿಗೆ ಬೋಧನೆ ಮಾಡುವಲ್ಲಿ ಜನಜಾಗೃತಿಯು ಒಳ್ಳೆಯ ಕೆಲಸವನ್ನು ಮಾಡಬೇಕಿದೆ ಎಂದು ಹೇಳಿದರು.
ಸಂಜೀವ ಶೆಟ್ಟಿ ಅವರು ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ರೈ ಅವರನ್ನು ಶಾಲು ಹೊದಿಸಿ ಗೌರವಿಸಿದರು. ಸಭೆಯಲ್ಲಿ ರಾಮಯ್ಯ ರೈ, ಮಾಟೆ ನಾರಾಯಣ, ಬಾಲಕೃಷ್ಣ ರೈ, ಜಯರಾಮ ಪಾಟಾಳಿ ಪಡುಮಲೆ ಮುಂತಾದವರು ಉಪಸ್ಥಿತರಿದ್ದರು. ಕಾರಡ್ಕ ವಲಯ ಮೇಲ್ವಿಚಾರಕ ಸುರೇಶ್ ಸ್ವಾಗತಿಸಿ, ವಂದಿಸಿದರು. ವಲಯದಲ್ಲಿ ಜನ ಜಾಗೃತಿ ವೇದಿಕೆಯಿಂದ ನಡೆದ ಕಾರ್ಯಕ್ರಮಗಳ ಅವಲೋಕನ ನಡೆಯಿತು. ವಲಯದಲ್ಲಿ ನಡೆಯಲಿರುವ ಮದ್ಯವರ್ಜನ ಶಿಬಿರ, ಸ್ವಾಸ್ತ್ಯ ಸಂಕಲ್ಪ, ಪರಿಸರ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.