ಕಾಸರಗೋಡು: ಶೂ ಧರಿಸಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಯನ್ನು ಹಿರಿಯ ವಿದ್ಯಾರ್ಥಿಗಳ ತಂಡವೊಂದು ಅತ್ಯಂತ ಕ್ರೂರವಾಗಿ ಥಳಿಸಿ ಚಿತ್ರಹಿಂಸೆ ನೀಡಿರುವ ಘಟನೆ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಚಿತ್ತಾರಿಯಲ್ಲಿ ನಡೆದಿದೆ.
ಪ್ಲಸ್‍ವನ್ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ, ಶೂ ಧರಿಸಿ ಶಾಲೆಗೆ ಆಗಮಿಸುತ್ತಿದ್ದಂತೆ ಹಿರಿಯ ವಿದ್ಯರ್ಥಿಗಳ ತಂಡವೊಂದು ಈತನನ್ನು ಕೊಠಡಿಗೆ ಕರೆದೊಯ್ದು ಡ್ರಿಲ್ ಮಾಡಲು ಆರಂಭಿಸಿದೆ. ವಿದ್ಯಾರ್ಥಿ ತಲೆಗೂದಲು ಹಿಡಿದು ಮುಖಕ್ಕೆ ಬಡಿಯುವುದು, ಥಳಿಸುವ ದೃಶ್ಯಗಳು ಕೆಲವೊಂದು ಮೊಬೈಲ್‍ಗಳಲ್ಲಿ ಹರಿದಾಡುತ್ತಿದೆ. ಥಳಿಸಿರುವ ವಿಷಯವನ್ನು ಶಾಲೆಯಲ್ಲಿ ಅಥವಾ ಮನೆಯವರಲ್ಲಿ ತಿಳಿಸಿದಲ್ಲಿ ಇದಕ್ಕಿಂತ ಹೆಚ್ಚಿನ ಹಲ್ಲೆ ಎದುರಿಸಬೇಕಾಗಿಬಂದೀತು ಎಂಬುದಾಗಿ ವಿದ್ಯಾರ್ಥಿಯನ್ನು ತಂಡ ಬೆದರಿಸಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಬಾಯಿ ಬಿಟ್ಟಿರಲಿಲ್ಲ. ಮೊಬೈಲ್‍ಗಳಲ್ಲಿ ದೃಶ್ಯ ಹರಿದಾಡುತ್ತಿರುವುದು ವಿದ್ಯಾರ್ಥಿಯ ಪೋಷಕರಿಗೂ ಲಭಿಸಿದ ಹಿನ್ನೆಲೆಯಲ್ಲಿ, ಕುಟುಂಬದವರು ಪೊಲೀಸರಿಗೆ ದೂರು ನೀಡಿದಾಗ ಹಿರಿಯ ವಿದ್ಯಾರ್ಥಿಗಳ ಕ್ರೂರತನ ಬಹಿರಂಗಗೊಂಡಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ರ್ಯಾಗಿಂಗ್‍ಗೆ ಸಮಾನವಾದ ಹೇಯ ಕೃತ್ಯ ನಡೆಸಿರುವ ಹಿರಿಯ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿದ್ಯರ್ಥಿ ಕುಟುಂಬದವರು ಆಗ್ರಹಿಸಿದ್ದಾರೆ.