ಕಾಸರಗೋಡು: ಬೇಕಲ ಬೀಚ್ ಪಾರ್ಕ್‍ಗೆ ಸಾರ್ವಜನಿಕರ ಭೇಟಿ ಅವಧಿಯನ್ನು ರಾತ್ರಿ 9ರ ವರೆಗೆ ವಿಸ್ತರಿಸಿರುವುದು ಬಿಟ್ಟರೆ, ಇಲ್ಲಿ ಮೂಲಸೌಕರ್ಯ ಒದಗಿಸಲು ಸಂಬಂಧಪಟ್ಟವರು ತಯಾರಾಗದಿರುವುದು ಖಂಡನೀಯ ಎಂದು ಸ್ಥಳೀಯರು ದೂರಿದ್ದಾರೆ.
ಈ ಪ್ರದೇಶದಲ್ಲಿ ಸಮರ್ಪಕ ಬೀದಿ ದೀಪ ವ್ಯಸ್ಥೆಯಿಲ್ಲದಿರುವುದರಿಂದ ಕತ್ತಲಾಗುತ್ತಿದ್ದಂತೆ ಹಲವಾರು ಪ್ರವಾಸಿಗರು ಉದ್ಯಾನವನದಿಂದ ವಾಪಸಾಗುತ್ತಿದ್ದಾರೆ. ಬೇಕಲ ರೈಲ್ವೇ ಮೇಲ್ಸೇತುವೆಯಿಂದ ಕೋಟೆಕುನ್ನು ಬಸ್ ನಿಲ್ದಾಣದವರೆಗೆ ಬೀದಿ ದೀಪಗಳಿಲ್ಲದ ಕಾರಣ ಕತ್ತಲು ಆವರಿಸುತ್ತಿದ್ದು, ಪ್ರವಾಸಿಗರುಪರದಾಟಬೇಕಾಗುತ್ತಿದೆ. ಪಳ್ಳಿಕ್ಕೆರೆ ಗ್ರಾಮ ಪಂಚಾಯಿತಿ ಬಳಿ ಬಿಆರ್‍ಡಿಸಿ ಅಳವಡಿಸಿರುವ ಮಿನಿ ಹೈಮಾಸ್ಟ್ ಕಳೆದ ಕೆಲವು ತಿಂಗಳಿಂದ ಉರಿಯದೆ ಉಪಯೋಗಶೂನ್ಯವಾಘಿದೆ. ಬೇಕಲದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರೂಪುಗೊಂಡ ಬಿಆರ್‍ಡಿಸಿಯಿಂದ ಕಚೇರಿ ಮುಂಭಾಗದಲ್ಲಿ ನಿರ್ಮಿಸಿರುವ ಹೈಮಾಸ್ಟ್ ಲೈಟುಗಳ ದುರಸ್ತಿಗಾಗಲಿ, ಬೀದಿ ದೀಪಗಳ ಅಳವಡಿಕೆಗಾಗಲಿ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ. ಪಳ್ಳಿಕ್ಕರ ಪಂಚಾಯಿತಿಗೆ ಸೇರಿದ ಈ ಪ್ರದೇಶದಲ್ಲಿ ಪಂಚಾಯಿತಿ ಅಧೀನದಲ್ಲಿ ಬೀದಿ ದೀಪ ಅಳವಡಿಸದಿರುವುದು ಪ್ರವಾಸಿಗರಲ್ಲಿ ಪಂಚಾಯಿತಿಗಿರುವ ನಿರ್ಲಕ್ಷ್ಯ ಧೋರಣೆ ಸಾಕ್ಷಿಯಾಗಿದೆ. ಸರ್ಕಾರದ ನೀಲವ್ ಯೋಜನೆಯನ್ವಯ ಬೀದಿ ದೀಪ ಅಳವಡಿಸಲು ಅರ್ಹತೆ ಹೊಂದಿದ್ದರೂ, ಇದ್ಯಾವುದೂ ಇಲ್ಲಿ ಪಾಲನೆಯಾಗುತ್ತಿಲ್ಲ. ಬೀದಿ ದೀಪ ಅಲವಡಿಕೆ ಬಗ್ಗೆ ಪಂಚಾಯಿತಿಯೂ ಆಸಕ್ತಿ ವಹಿಸುತ್ತಿಲ್ಲ.
ಪಳ್ಳಿಕ್ಕರ ಪಂಚಾಯಿತಿ ಮುಂದಾಳತ್ವ ವಹಿಸಿದ್ದು, ಖಾಸಗಿ ಕಂಪನಿ ಬೇಕಲ ರೈಲ್ವೆ ಮೇಲ್ಸೇತುವೆ ಮೇಲೆ ದೀಪಗಳನ್ನು ಅಳವಡಿಸಿದೆ. ಉದ್ಯಾನದಲ್ಲಿ ಹೊಸ ಟ್ರಾನ್ಸ್‍ಫಾರ್ಮರ್ ಅಳವಡಿಸಿದಲ್ಲಿ ಈ ಸಮಸ್ಯೆಗೆ ಪರಿಹಾರ ಲಭ್ಯವಾಗಲಿದ್ದು, ಈ ಬಗ್ಗೆ ತುರ್ತು ಗಮನ ಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.