ಡ್ರಾಸ್ : ಭಯೋತ್ಪಾದನೆ ಹಾಗೂ ಭಯೋತ್ಪಾದಕರ ಉದ್ದೇಶಗಳು ಎಂದಿಗೂ ಈಡೇರುವುದಿಲ್ಲ ಎಂದು ಕಾರ್ಗಿಲ್‌ನ ಡ್ರಾಸ್ ಕಣಿವೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.
ಕಾರ್ಗಿಲ್ ವಿಜಯ ದಿವಸದ ರಜತ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಡ್ರಾಸ್ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.
'ಈ ಜಾಗದಿಂದ ನನ್ನ ಮಾತುಗಳು ಭಯೋತ್ಪಾದನೆಗೆ ಬೆಂಬಲ ನೀಡುವುವರಿಗೆ ನೇರವಾಗಿ ಕೇಳುತ್ತವೆ. ಸರಿಯಾಗಿ ಕೇಳಿಸಿಕೊಳ್ಳಿ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರುವುದಿಲ್ಲ' ಎಂದು ಪರೋಕ್ಷವಾಗಿ ಪ್ರತ್ಯೇಕವಾದಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಇತಿಹಾಸದಿಂದ ಪಾಕಿಸ್ತಾನ ಎಂದಿಗೂ ಪಾಠ ಕಲಿಯಲಿಲ್ಲ. ಇದರಿಂದ ಪದೇ ಪದೇ ಪೆಟ್ಟು ತಿನ್ನುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಾಠ ಕಲಿಯದ ಪಾಕಿಸ್ತಾನ ಕಾಲು ಕೆರೆದುಕೊಂಡು ಜಗಳ ಮಾಡಲು ಹೋಗಿ ಪ್ರತಿ ಭಾರಿ ಮುಖಭಂಗ ಅನುಭವಿಸಿದೆ ಎಂದು ಹೇಳಿದ್ದಾರೆ.
ರಾಷ್ಟ್ರದ ಸೇವೆಗಾಗಿ ಪ್ರಾಣ ತ್ಯಾಗ ಮಾಡಿದ ಸಶಸ್ತ್ರ ಪಡೆಗಳ ಅಧಿಕಾರಿಗಳು ಮತ್ತು ಸೈನಿಕರಿಗೆ ಗೌರವ ಸಲ್ಲಿಸಿದ ಅವರು, ನಮ್ಮ ಯೋಧರ ಬಲಿದಾನ ಅಮರ ಎಂದು ಹೇಳಿದರು.
ಕಾರ್ಗಿಲ್‌ನಲ್ಲಿ ಸುಮಾರು ಮೂರು ತಿಂಗಳ ಕಾಲ ನಡೆದ ಯುದ್ಧವು 1999ರ ಜುಲೈ 26ರಂದು ಅಧಿಕೃತವಾಗಿ ಕೊನೆಗೊಂಡಿತು. ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತವು ವಿಜಯ ಸಾಧಿಸಿದ ಸ್ಮರಣಾರ್ಥ ಈ ದಿನವನ್ನು 'ಕಾರ್ಗಿಲ್ ವಿಜಯ ದಿವಸ' ಎಂದು ಆಚರಿಸಲಾಗುತ್ತದೆ.