ನವದೆಹಲಿ: ದೇಶದಲ್ಲಿ 'ಆರ್ಥಿಕ ಅಸಮಾನತೆಯು ಹೆಚ್ಚಾಗುತ್ತಿದೆ' ಎಂದು ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದೆ. ಬಡವರು ಹಾಗೂ ಶ್ರೀಮಂತರ ನಡುವಿನ ಅಂತರವು ಹೆಚ್ಚಾಗುತ್ತಿದೆ ಎಂಬುದನ್ನು ಪ್ರತಿಯೊಂದು ಅಂಕಿಅಂಶವೂ ತಿಳಿಸುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.
ನವದೆಹಲಿ: ದೇಶದಲ್ಲಿ 'ಆರ್ಥಿಕ ಅಸಮಾನತೆಯು ಹೆಚ್ಚಾಗುತ್ತಿದೆ' ಎಂದು ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದೆ. ಬಡವರು ಹಾಗೂ ಶ್ರೀಮಂತರ ನಡುವಿನ ಅಂತರವು ಹೆಚ್ಚಾಗುತ್ತಿದೆ ಎಂಬುದನ್ನು ಪ್ರತಿಯೊಂದು ಅಂಕಿಅಂಶವೂ ತಿಳಿಸುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.
ನಿತ್ಯದ ಅಗತ್ಯಗಳಿಗಾಗಿ ಬಡ ಕುಟುಂಬಗಳು ಮಾಡುವ ವೆಚ್ಚ ಹಾಗೂ ಶ್ರೀಮಂತ ಕುಟುಂಬಗಳು ಮಾಡುವ ವೆಚ್ಚದ ನಡುವಿನ ಅಂತರವು ಸರಿಸುಮಾರು ಹತ್ತು ಪಟ್ಟು ಎಂದು ಹೇಳುವ ಮಾಧ್ಯಮ ವರದಿಯೊಂದನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು 'ಎಕ್ಸ್' ಮೂಲಕ ಹಂಚಿಕೊಂಡಿದ್ದಾರೆ.
ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಕಡು ಬಡತನದಲ್ಲಿ ಇರುವ ಶೇ 5ರಷ್ಟು ಮಂದಿ ದಿನನಿತ್ಯದ ಅಗತ್ಯಗಳಿಗಾಗಿ ಮಾಡುವ ಮಾಸಿಕ ವೆಚ್ಚವು ₹1,373 ಆಗಿದ್ದರೆ, ನಗರ ಪ್ರದೇಶಗಳಲ್ಲಿ ಶ್ರೀಮಂತರ ಪೈಕಿ ಶೇ 5ರಷ್ಟು ಮಂದಿ ಮಾಡುವ ತಿಂಗಳ ವೆಚ್ಚ ₹20,824 ಎಂದು ಮಾಧ್ಯಮ ವರದಿಯನ್ನು ಉಲ್ಲೇಖಿಸಿ ರಮೇಶ್ ಹೇಳಿದ್ದಾರೆ.
'ಇದು ಹೊಸ ಅಂಕಿ-ಅಂಶ. ಆದರೆ, ಯಾವುದೇ ದತ್ತಾಂಶವನ್ನು ಪರಿಶೀಲಿಸಿದರೂ, ಬಡವರು ಹಾಗೂ ಶ್ರೀಮಂತರ ನಡುವಿನ ಅಂತರವು ಹೆಚ್ಚಾಗುತ್ತಿರುವುದನ್ನು ಅವು ತೋರಿಸುತ್ತಿವೆ' ಎಂದು ಅವರು 'ಎಕ್ಸ್'ನಲ್ಲಿ ಬರೆದಿದ್ದಾರೆ.
ದೇಶದಲ್ಲಿ 2012ರಿಂದ 2021ರ ನಡುವಿನ ಅವಧಿಯಲ್ಲಿ ಸೃಷ್ಟಿಯಾದ ಸಂಪತ್ತಿನಲ್ಲಿ ಶೇ 40ರಷ್ಟು ಭಾಗವು ಶೇ 1ರಷ್ಟು ಜನರಿಗೆ ಮಾತ್ರ ಸಿಕ್ಕಿದೆ ಎಂದು ಅವರು ಆರೋಪಿಸಿದ್ದಾರೆ. 'ದೇಶದಲ್ಲಿ ಸಂಗ್ರಹವಾಗುವ ಒಟ್ಟು ಜಿಎಸ್‌ಟಿ ವರಮಾನದಲ್ಲಿ ಶೇ 64ರಷ್ಟು ಭಾಗವು ಬಡ, ಕೆಳ ಮಧ್ಯಮ ಹಾಗೂ ಮಧ್ಯಮ ವರ್ಗದವರಿಂದ ಬರುತ್ತಿದೆ' ಎಂದು ರಮೇಶ್ ಹೇಳಿದ್ದಾರೆ.
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಸರ್ಕಾರಿ ಆಸ್ತಿ ಹಾಗೂ ಸಂಪನ್ಮೂಲಗಳಲ್ಲಿ ಹೆಚ್ಚಿನ ಪಾಲನ್ನು ಒಂದು ಅಥವಾ ಎರಡು ಕಂಪನಿಗಳಿಗೆ ಮಾರಾಟ ಮಾಡಲಾಗಿದೆ. ಅರ್ಥ ವ್ಯವಸ್ಥೆಯಲ್ಲಿ ಏಕಸ್ವಾಮ್ಯ ಹೆಚ್ಚಾಗುತ್ತಿರುವುದು ಹಣದುಬ್ಬರಕ್ಕೆ ಕಾರಣವಾಗುತ್ತಿದೆ ಎಂಬುದನ್ನು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ ಎಂದು ರಮೇಶ್ ವಿವರಿಸಿದ್ದಾರೆ.