ಕುಂಬಳೆ: ಕುಂಬಳೆಯಲ್ಲಿ ಚಟುವಟಿಕೆ ನಡೆಸುತ್ತಿರುವ ಮರ್ಚಂಟ್ಸ್ ವೆಲ್ಫೇರ್ ಕೋಓಪರೇಟಿವ್ ಸೊಸೈಟಿ ಆಡಳಿತ ಸಮಿತಿಯನ್ನು ಸಹಕಾರಿ ಇಲಾಖೆ ಅಮಾನತುಗೊಳಿಸಿದೆ. ಸೊಸೈಟಿಯ ತಾತ್ಕಾಲಿಕ ಆಡಳಿತಾಧಿಕಾರಿಯಾಗಿ ಸಹಕಾರಿ ಇಲಾಖೆ ಇನ್ಸ್‍ಪೆಕ್ಟರ್ ಬೈಜುರಾಜ್ ಅವರನ್ನು ನಿಯೋಜಿಸಲಾಗಿದೆ.
ಕಳೆದ ಹಲವು ವರ್ಷಗಳಿಂದ ಸೊಸೈಟಿಯಲ್ಲಿ ನಡೆದುಬರುತ್ತಿದೆ ಎನ್ನಲಾದ ಆರ್ಥಿಕ ಅವ್ಯವಹಾರ ಹಾಗೂ ಲೆಕ್ಕಪತ್ರಗಳಲ್ಲಿನ ಲೋಪದ ಬಗ್ಗೆ ಲಭಿಸಿದ ದೂರಿನ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಸೊಸೈಟಿಯಲ್ಲಿ ದೀರ್ಘ ಕಾಲದಿಂದ ನಡೆದುಬರುತ್ತಿರುವ ಭ್ರಷ್ಟಾಚಾರಗಳ ಬಗ್ಗೆ ಸೊಸೈಟಿ ಸದಸ್ಯ ವಿಕ್ರಂ ಪೈ ಹೈಕೋರ್ಟಿಗೆ ದೂರು ಸಲ್ಲಿಸಿದ್ದು, ನ್ಯಾಯಲಯ ಈ ಬಗ್ಗೆ ಕ್ರಮ ಆರಂಭಿಸುತ್ತಿದ್ದಂತೆ ಸೊಸೈಟಿಯ ಮೂವರು ಸದಸ್ಯರು ರಾಜೀನಾಮೆ ನೀಡಿದ್ದರು. ಒಂಬತ್ತು ಮಂದಿ ಸದಸ್ಯರನ್ನೊಳಗೊಂಡ ಸಮಿತಿಯಿಂದ ವಿಕ್ರಂ ಪೈ ಕಳೆದ ವರ್ಷ ಜೂನ್‍ನಲ್ಲಿ ತಮ್ಮ ರಾಜೀನಾಮೆ ಸಲ್ಲಿಸಿದ್ದರು. ದೂರು ಪರಿಗಣಿಸಿ ಹೈಕೋರ್ಟು ಕ್ರಮಕ್ಕೆ ಮುಂದಾಗುತ್ತಿದ್ದಂತೆ ಒಬ್ಬೊಬ್ಬ ಸದಸ್ಯ ರಾಜೀನಾಮೆ ಸಲ್ಲಿಸುತ್ತಾ ಬಂದಿದ್ದು, ಪ್ರಸಕ್ತ ಸದಸ್ಯರ ಸಂಖ್ಯೆ ನಾಲ್ಕಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಸಹಕಾರಿ ಸಂಘ ಆಡಳಿತ ಸಮಿತಿಯನ್ನು ಅಮಾನತುಗೊಳಿಸಿದೆ.