ಬದಿಯಡ್ಕ: ಗುರುವಿನ ಅನುಗ್ರಹವಿದ್ದರೆ ಏನನ್ನೂ ಸಾಸಲು ಸಾಧ್ಯವಿದೆ. ನಮ್ಮ ಜೀವನದುದ್ದಕ್ಕೂ ಉತ್ತಮ ಕಾರ್ಯಗಳನ್ನು ನಿರ್ವಹಿಸುತ್ತಾ ಮುಂದುವರಿದಾಗ ದೇವತಾನುಗ್ರಹವಾಗುತ್ತದೆ ಎಂದು ಮುಂಡಪಳ್ಳ ಶ್ರೀ ರಾಜರಾಜೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ ಹೇಳಿದರು.
ಜಗದ್ಗುರು ಶಂಕರಾಚಾರ್ಯ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಚತುರ್ಥ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಜರಗಿದ ಸಾಂಸ್ಕøತಿಕ ಕಾರ್ಯಕ್ರಮಗಳ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಭಾನುವಾರ ನೆರವೇರಿಸಿ ಅವರು ಮಾತನಾಡಿದರು.
ಉದುಮ ಶಾಸಕ ನ್ಯಾಯವಾದಿ ಸಿ.ಎಚ್.ಕುಞಂಬು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನವನ್ನು ನೀಡಿ ದೇವಸ್ಥಾನಗಳಲ್ಲಿ ಎಲ್ಲರೂ ಬೆರೆತು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಹಿಂದೂ ಧರ್ಮದಲ್ಲಿ ಯಾರೂ ಜಾತಿಯ ಪ್ರಶ್ನೆ ಎತ್ತುವುದಿಲ್ಲ. ಆದರೆ ನಮ್ಮನ್ನು ಆಳುವ ಸರ್ಕಾರವೇ ಜಾತಿಬೇಧವನ್ನು ಸೃಷ್ಟಿಸುತ್ತದೆ. ಯಾವುದೇ ದಾಖಲೆಗೆ ಯಾವಜಾತಿ ಎಂಬ ಕಾಲಂ ಇರುತ್ತದೆ. ಎಲ್ಲಾ ಸ್ಥರದ ಜನರೂ ಎಡನೀರು ಮಠದಲ್ಲಿ ತಮ್ಮ ಸೇವೆಯನ್ನು ನಿರಂತರ ಕೈಗೊಳ್ಳುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಕಲೆ, ಕಲಾಸೇವೆಯು ದೇವತಾಸೇವೆ ಎಂದರು.
ಪ್ರಸಿದ್ಧ ಯಕ್ಷಗಾನ ಭಾಗವತರಾದ ಸತ್ಯನಾರಾಯಣ ಪುಣಿಂಚಿತ್ತಾಯ ಪ್ರಾರ್ಥನೆ ಹಾಡಿದರು.ವಿದ್ವಾನ್. ಹಿರಣ್ಯ ವೆಂಕಟೇಶ್ವರ ಭಟ್ ನಿರೂಪಿಸಿದರು. ವಕೀಲ ಎಂ. ನಾರಾಯಣ ಭಟ್ ಸ್ವಾಗತಿಸಿ, ಚಾತುರ್ಮಾಸ್ಯ ಸಮಿತಿಯ ಉಪಾಧ್ಯಕ್ಷ ಡಾ. ಭಾಸ್ಕರ್ ಭಾರ್ಯ ಪುತ್ತೂರು ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ವಾನ್. ಬಳ್ಳಪದವು ಯೋಗೀಶ ಶರ್ಮಾ ಗಾಯನದಲ್ಲಿ ಭಕ್ತಿಸಂಗೀತ ನಡೆಯಿತು. ರಾತ್ರಿ ಕಾಳಿದಾಸ-ದಾಕ್ಷಾಯಿಣಿ ಎಂಬ ಪ್ರಸಂಗಗಳ ಯಕ್ಷವೈಭವ ಪ್ರದರ್ಶನಗೊಂಡಿತು.