ರುಚಿಯಾದ ದ್ರಾಕ್ಷಿ ಹಣ್ಣನ್ನು ನಾವೆಲ್ಲಾ ಇಂದು ಚಪ್ಪರಿಸಲು ಡೈನೋಸಾರ್‌ಗಳ ಅಳಿವೇ ಕಾರಣ ಎಂದು ಆವಿಷ್ಕಾರವೊಂದು ಹೇಳಿದೆ. ಪ್ಯಾಲಿಯೊಬೊಟನಿಯಲ್ಲಿನ ಹೊಸ ಆವಿಷ್ಕಾರವು 60 ರಿಂದ 19 ಮಿಲಿಯನ್ ವರ್ಷಗಳಷ್ಟು ಹಿಂದಿನ ಪಳೆಯುಳಿಕೆ ದ್ರಾಕ್ಷಿ ಬೀಜಗಳನ್ನು ಕಂಡುಕೊಂಡಿದ್ದು, ಡೈನೋಸಾರ್‌ಗಳ ಅಳಿವಿನ ನಂತರವೇ ದ್ರಾಕ್ಷಿ ಬಳ್ಳಿಯ ವಿಕಾಸವಾಯಿತು ಎಂಬ ಅಚ್ಚರಿ ವಿಷಯವನ್ನು ಬಹಿರಂಗಪಡಿಸಿದೆ.
ನೇಚರ್ ಪ್ಲಾಂಟ್ಸ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದಲ್ಲಿ ವಿವರಿಸಿದಂತೆ ಕೊಲಂಬಿಯಾ, ಪನಾಮ ಮತ್ತು ಪೆರುಗಳಲ್ಲಿ 60 ರಿಂದ 19 ಮಿಲಿಯನ್ ವರ್ಷಗಳಷ್ಟು ಹಿಂದಿನ ಪಳೆಯುಳಿಕೆ ದ್ರಾಕ್ಷಿ ಬೀಜಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಈ ಮೂಲಕ ವಿಶ್ವದಲ್ಲಿ ನೆಲೆಗೊಂಡ ದೈತ್ಯ ಪ್ರಾಣಿ ಡೈನೋಸಾರ್ ಅವನತಿ ಹೊಂದಿದೆ ಮೇಲೆ ಸಾಕಷ್ಟು ಸಸ್ಯ ಸಂಕುಲ ವಿಕಸನಗೊಂಡಿತು, ಅದರಲ್ಲಿ ದ್ರಾಕ್ಷಿಯೂ ಒಂದು ಇರಬಹುದು ಎಂದಿದೆ.
ಒಂಬತ್ತು ಹೊಸ ಜಾತಿಯ ಪಳೆಯುಳಿಕೆ ದ್ರಾಕ್ಷಿ ಪತ್ತೆ
ಶಿಕಾಗೋದಲ್ಲಿನ ಫೀಲ್ಡ್ ಮ್ಯೂಸಿಯಂನಲ್ಲಿ ಸಹಾಯಕ ಕ್ಯುರೇಟರ್ ಫ್ಯಾಬಿಯಾನಿ ಹೆರೆರಾ ನೇತೃತ್ವದಲ್ಲಿ ತಂಡವು ಒಂಬತ್ತು ಹೊಸ ಜಾತಿಯ ಪಳೆಯುಳಿಕೆ ದ್ರಾಕ್ಷಿಗಳನ್ನು ಗುರುತಿಸಿದೆ. ದೊರೆತಿರುವ ಈ ಪಳೆಯುಳಿಕೆ ಬೀಜವು ಚಿಕ್ಕದಾಗಿದ್ದು, ಹೆರೆರಾ ನೇತೃತ್ವದ ತಂಡವು ಅದರ ನಿರ್ದಿಷ್ಟ ಆಕಾರ, ಗಾತ್ರ ಮತ್ತು ಇತರ ರೂಪವಿಜ್ಞಾನದ ವೈಶಿಷ್ಟ್ಯಗಳ ಆಧಾರದ ಮೇಲೆ ಅದನ್ನು ಗುರುತಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಈ ಸಂಶೋಧನೆಯು ಡೈನೋಸಾರ್ ಅಳಿವಿನ ಘಟನೆಯ ನಂತರ ಜಗತ್ತಿನಾದ್ಯಂತ ದ್ರಾಕ್ಷಿಗಳು ಹೇಗೆ ಪ್ರವರ್ಧಮಾನಕ್ಕೆ ಬಂದವು ಎಂಬುದರ ಕುರಿತು ನಿರ್ಣಾಯಕ ಒಳನೋಟಗಳನ್ನು ಒದಗಿಸುತ್ತದೆ.
ಪ್ರಾಚೀನ ಅರಣ್ಯ ಪರಿಸರ ವ್ಯವಸ್ಥೆಗಳ ಬದಲಾವಣೆ
ಆವಿಷ್ಕಾರವು ವಿಶೇಷವಾಗಿ ಗಮನಾರ್ಹವಾಗಿದೆ. ಏಕೆಂದರೆ ಇದು 66 ಮಿಲಿಯನ್ ವರ್ಷಗಳ ಹಿಂದೆ ಬೃಹತ್ ಕ್ಷುದ್ರಗ್ರಹ ಪ್ರಭಾವದ ನಂತರದ ಅವಧಿಗೆ ಹೊಂದಿಕೆಯಾಗುತ್ತದೆ. ಡೈನೋಸಾರ್‌ಗಳನ್ನು ಕೊಂದ ಅಳಿವಿನ ಘಟನೆಯು ಭೂಮಿ ಮೇಲಿನ ಪ್ರಾಣಿಗಳ ಮೇಲೆ ಮಾತ್ರವಲ್ಲದೆ ಸಸ್ಯಗಳ ಮೇಲೂ ಪರಿಣಾಮ ಬೀರಿದೆ ಎಂದು ಸಂಶೋಧನೆಗಳು ತೋರಿಸುತ್ತವೆ.
ಹೆರೆರಾ ಮತ್ತು ಅವರ ಸಹೋದ್ಯೋಗಿಗಳು ದೊಡ್ಡ ಡೈನೋಸಾರ್‌ಗಳ ಕಣ್ಮರೆಯು ಅರಣ್ಯ ಪರಿಸರ ವ್ಯವಸ್ಥೆಗಳನ್ನು ಬದಲಾಯಿಸಿರಬಹುದು ಎಂದು ಊಹಿಸಿದ್ದಾರೆ. ಹಾಗೆಯೇ ಡೈನೋಸಾರ್‌ಗಳ ಅವನತಿಯು ದ್ರಾಕ್ಷಿಯಂತಹ ಚಪ್ಪರದ ಸಸ್ಯಗಳ ಬೆಳವಣಿಗೆಗೂ ಕಾರಣವಾಯ್ತು ಎಂದಿವೆ ಸಂಶೋಧನೆ.
ಈ ದೊಡ್ಡ ಸಸ್ಯಹಾರಿಗಳಾದ ಡೈನೋಸಾರ್‌ಗಳ ಅನುಪಸ್ಥಿತಿಯು ಉಷ್ಣವಲಯದ ಕಾಡುಗಳು ದಕ್ಷಿಣ ಅಮೆರಿಕಾದಲ್ಲಿ ದಟ್ಟವಾಗಲು ಅವಕಾಶ ಮಾಡಿಕೊಟ್ಟಿದೆ ಎಂದು ಸಂಶೋಧಕರು ನಂಬಿದ್ದಾರೆ. ಡೈನೋಸಾರ್‌ಗಳು ಮರಗಳನ್ನು ಹೊಡೆದು ಉರುಳಿಸುತ್ತಿದ್ದವು, ಹೀಗಾಗಿ ಆಗ ಕಾಡು ಬರಿದಾಗಿತ್ತೇನೋ, ಇವುಗಳ ನಂತರ ಒಂದು ಮಟ್ಟಿಗೆ ಕಾಡು ಅಭಿವೃದ್ಧಿಯಾಯಿತು ಎಂದಿದ್ದಾರೆ.
ವಿಶ್ವದ ಅತ್ಯಂತ ಹಳೆಯ ದ್ರಾಕ್ಷಿ ಪಳೆಯುಳಿಕೆ
ಈ ಅಧ್ಯಯನದಲ್ಲಿ ಕೊಲಂಬಿಯಾದ ಆಂಡಿಸ್‌ನಲ್ಲಿ ಕಂಡುಬಂದಂತಹ ದ್ರಾಕ್ಷಿ ಬೀಜದ ಪಳೆಯುಳಿಕೆಯು 60 ಮಿಲಿಯನ್ ವರ್ಷಗಳಷ್ಟು ಹಿಂದಿನದು ಎನ್ನಲಾಗಿದೆ. ಈ ಬೀಜಗಳಿಗೆ ಲಿಥೌವಾ ಸುಸ್ಮಾನಿ ಎಂದು ಹೆಸರಿಸಲಾಗಿದ್ದು, ಇದು ವಿಶ್ವದ ಅತ್ಯಂತ ಹಳೆಯ ದ್ರಾಕ್ಷಿ ಪಳೆಯುಳಿಕೆಗಳಲ್ಲಿ ಒಂದನ್ನು ಪ್ರತಿನಿಧಿಸುತ್ತದೆ. ಪಳೆಯುಳಿಕೆಯ ಗುರುತು ಮತ್ತು ಆಂತರಿಕ ರಚನೆಯನ್ನು ಖಚಿತಪಡಿಸಲು ಸಂಶೋಧನಾ ತಂಡವು ಸಿಟಿ ಸ್ಕ್ಯಾನ್‌ಗಳನ್ನು ಒಳಗೊಂಡಂತೆ ಸುಧಾರಿತ ತಂತ್ರಗಳನ್ನು ಬಳಸಿಕೊಂಡಿದೆ.
ಈ ಅಧ್ಯಯನವು ದ್ರಾಕ್ಷಿಯ ವಿಕಸನೀಯ ಪ್ರಯಾಣದ ಮೇಲೆ ಬೆಳಕು ಚೆಲ್ಲಿದೆ. ಇನ್ನು ಪತ್ತೆಯಾದ ಕೆಲವು ಪಳೆಯುಳಿಕೆಗಳು ಈಗ ಪೂರ್ವ ಗೋಳಾರ್ಧದಲ್ಲಿ ಮಾತ್ರ ಕಂಡುಬರುವ ಜಾತಿಗಳನ್ನು ಪ್ರತಿನಿಧಿಸುತ್ತವೆ. ಈ "ಬೀಜಗಳು" ಅರಣ್ಯ ವಿಕಸನ ಮತ್ತು ಸಸ್ಯ ಜೀವನದ ಮೇಲೆ ಪ್ರಮುಖ ಅಳಿವಿನ ಘಟನೆಗಳ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸುತ್ತವೆ ಎಂದು ಹೆರೆರಾ ತಿಳಿಸಿದ್ದಾರೆ.