ಕೋಲ್ಕತಾ: ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಮತ್ತು ರಾಜ್ಯದ ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ನಡುವಿನ ತಿಕ್ಕಾಟ ಬಗೆಹರಿಯುವಂತೆ ಕಾಣುತ್ತಿಲ್ಲ. ರಾಜಭವನ ಮತ್ತು ಮುಖ್ಯಮಂತ್ರಿ ಕಚೇರಿ ನಡುವಿನ ಭಿನ್ನಾಭಿಪ್ರಾಯಕ್ಕೆ ಇಬ್ಬರು ಐಪಿಎಸ್ ಅಧಿಕಾರಿಗಳು ಶಿಕ್ಷೆ ಅನುಭವಿಸುವಂತಾಗಿದೆ.
ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ದೂರಿನ ಮೇರೆಗೆ ಕೇಂದ್ರ ಗೃಹ ಸಚಿವಾಲಯವು ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭಿಸಿದೆ. ಗೃಹ ಸಚಿವಾಲಯವು ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಮತ್ತು ಕೇಂದ್ರ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಇಂದಿರಾ ಮುಖರ್ಜಿ ವಿರುದ್ಧ ಶಿಸ್ತು ಕ್ರಮವನ್ನು ಪ್ರಾರಂಭಿಸಿದೆ.
ಇವರಿಬ್ಬರ ಕಾರ್ಯವೈಖರಿ ಕುರಿತು ರಾಜ್ಯಪಾಲ ಸಿವಿ ಆನಂದ್ ಬೋಸ್ ವರದಿ ಸಲ್ಲಿಸಿದ ಬಳಿಕ ಕೇಂದ್ರ ಸಚಿವಾಲಯ ಈ ಕ್ರಮ ಕೈಗೊಂಡಿದೆ. ಈ ಅಧಿಕಾರಿಗಳು ಕೆಲಸ ಮಾಡುತ್ತಿರುವ ರೀತಿ ಸರ್ಕಾರಿ ನೌಕರನಿಗೆ ಸಲ್ಲದು ಎಂದು ರಾಜ್ಯಪಾಲರು ತಮ್ಮ ವರದಿಯಲ್ಲಿ ಆರೋಪಿಸಿದ್ದಾರೆ.
ಜೂನ್ ಅಂತ್ಯದಲ್ಲಿ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದರು. ಲೋಕಸಭೆ ಚುನಾವಣೆಯ ನಂತರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಂತ್ರಸ್ತರನ್ನು ಭೇಟಿಯಾಗದಂತೆ ಕೋಲ್ಕತ್ತಾ ಪೊಲೀಸ್ ಅಧಿಕಾರಿಗಳು ತಡೆದಿದ್ದಾರೆ ಎಂದು ರಾಜ್ಯಪಾಲರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯಪಾಲರ ವರದಿ ಆಧರಿಸಿ ಕೇಂದ್ರ ಗೃಹ ಸಚಿವಾಲಯ ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದೆ.
ಕೋಲ್ಕತ್ತಾದ ರಾಜಭವನದಲ್ಲಿ ಭದ್ರತಾ ಕರ್ತವ್ಯಕ್ಕಾಗಿ ನಿಯೋಜಿಸಲಾದ ಕೆಲವು ಪೊಲೀಸ್ ಅಧಿಕಾರಿಗಳು ಮಹಿಳಾ ಉದ್ಯೋಗಿ ಮಾಡಿದ ಕಪೋಲಕಲ್ಪಿತ ಆರೋಪಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ರಾಜ್ಯಪಾಲರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯಪಾಲರ ಕಚೇರಿಯಿಂದ ಯಾವುದೇ ಆದೇಶದ ಹೊರತಾಗಿಯೂ, ಕೋಲ್ಕತ್ತಾ ಪೊಲೀಸರು ರಾಜಭವನದ ಉದ್ಯೋಗಿಗಳಿಗೆ ಗುರುತಿನ ಚೀಟಿಗಳನ್ನು ನೀಡುವ ಹೊಸ ವಿಧಾನವನ್ನು ಪ್ರಾರಂಭಿಸಿದ್ದಾರೆ. ಪ್ರವೇಶ ಮತ್ತು ನಿರ್ಗಮನದ ಸಮಯದಲ್ಲಿ ನೌಕರರನ್ನು ಪರೀಕ್ಷಿಸುತ್ತಾರೆ ಎಂದು ರಾಜ್ಯಪಾಲರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ಐಪಿಎಸ್ ಅಧಿಕಾರಿಗಳು ತಮ್ಮ ವರ್ತನೆಯಿಂದ ರಾಜ್ಯಪಾಲರ ಹುದ್ದೆಗೆ ಕಳಂಕ ತರುತ್ತಿದ್ದಾರೆ ಎಂದು ಆನಂದ್ ಬೋಸ್ ಆರೋಪಿಸಿದ್ದಾರೆ. ವದಂತಿಗಳನ್ನು ಹಬ್ಬಿಸಿ ಸುಳ್ಳು ಆರೋಪಗಳನ್ನು ಪ್ರೋತ್ಸಾಹಿಸುವ ಮೂಲಕ ರಾಜ್ಯಪಾಲರು ಕಚೇರಿಗೆ ಅಪಖ್ಯಾತಿ ತಂದಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಗೃಹ ಇಲಾಖೆಯ ಕ್ರಮಗಳಿಗೆ ಕೋಲ್ಕತ್ತಾ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.