ಬದಿಯಡ್ಕ: ತೆಂಕುತಿಟ್ಟು ಯಕ್ಷಗಾನದ ತವರುನೆಲ ಕುಂಬ್ಳೆ ಸೀಮೆಗೆ ಕೀರ್ತಿ ತಂದಿತ್ತು, ಕುಂಬ್ಳೆಯ ಹೆಸರನ್ನು ಮೆರೆಸಿದ ಕಲಾವಿದ ಶ್ರೀಧರ ರಾಯರಿಗೆ ನಾಳೆ(ಜು.೨೮) ನೀರ್ಚಾಲಿನಲ್ಲಿ ನುಡಿನಮನದೊಂದಿಗೆ ಶ್ರದ್ಧಾಂಜಲಿ ತಾಳಮದ್ದಳೆ ನಡೆಯಲಿದೆ.
ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದಲ್ಲಿ ಅಪರಾಹ್ನ ೨ರಿಂದ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ *ಶ್ರೀರಾಮ ಪರಂಧಾಮ* ಆಖ್ಯಾನದ ತಾಳಮದ್ದಳೆ ನಡೆಯಲಿದ್ದು ಹಿಮ್ಮೇಳ-ಮುಮ್ಮೇಳದಲ್ಲಿ ಪ್ರಸಿದ್ದ ಕಲಾವಿದರು ಪಾಲ್ಗೊಳ್ಳುವರು.
ನುಡಿನಮನ:
ಕುಂಬ್ಳೆ ಶ್ರೀಧರ ರಾಯರ ಅಭಿನಂಧನಾ ಗ್ರಂಥದ ಸಿದ್ದತೆಯಲ್ಲಿದ್ದಾಗಲೇ ಅವರು ಅಗಲಿದ್ದು ವಿಪರ್ಯಾಸ. ಅಭಿನಂಧನಾ ಗ್ರಂಥದ ಸಂಪಾದಕರಾದ ಕಲಾವಿದ, ಪತ್ರಕರ್ತ ನಾ. ಕಾರಂತ ಪೆರಾಜೆ ಶ್ರೀಧರರಾಯರಿಗೆ ನುಡಿನಮನ ಸಲ್ಲಿಸುವರು.
ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ದೀಪಪ್ರಜ್ವಲನೆಗೈದು ಚಾಲನೆ ನೀಡುವರು. ಕ.ಸಾ.ಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ, ಶ್ರೀಧರರಾವ್ ಅಭಿನಂಧನಾ ಗ್ರಂಥ ಸಮಿತಿ ಅಧ್ಯಕ್ಷ ಭಗವಾನ್ ದಾಸ್ ಬೆಂಗಳೂರು, ಶ್ರೀಧರ ರಾವ್ ಸಹೋದರ,ಕಲಾವಿದ ಗೋಪಾಲ್ ಕುಂಬ್ಳೆ ಸಹಿತ ಗಣ್ಯರು ಪಾಲ್ಗೊಳ್ಳುವರು.
ಕುಂಬಳೆ ಶ್ರೀಧರ ರಾವ್ ಅಭಿಮಾನಿಗಳಿಂದ ಗೌರವಪೂರ್ವಕ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕಲಾಭಿಮಾನಿಗಳು , ಶ್ರೀಧರ ರಾವ್ ಸ್ನೇಹಿತರು, ಒಡನಾಡಿಗಳು ಪಾಲ್ಗೊಳ್ಳಬೇಕೆಂದು ವಿನಂತಿಸಲಾಗಿದೆ.