ಪಟ್ನಾ: ಬಿಹಾರದ ಪೊಲೀಸ್ ಇಲಾಖೆಗೆ ಮೊದಲ ಲಿಂಗತ್ವ ಅಲ್ಪಸಂಖ್ಯಾತ ಸಬ್ ಇನ್‌ಸ್ಪೆಕ್ಟರ್ ಆಗಿ ಮಾನ್ವಿ ಮಧು ಕಶ್ಯಪ್ ಅವರು ನೇಮಕಗೊಂಡಿದ್ದಾರೆ.
ಇದಕ್ಕಾಗಿ ಅವರು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಇತರರಿಗೆ ಧನ್ಯವಾದ ತಿಳಿಸಿದ್ದಾರೆ.
'ಬದುಕಿನಲ್ಲಿ ಬಹಳಷ್ಟು ಕಷ್ಟಗಳನ್ನು ಎದುರಿಸಿದ್ದೇನೆ.
'ಕಲಿಕೆಯ ಪರಿಸರ ಹಾಳಾಗುವುದಾಗಿ ಬಹಳಷ್ಟು ಕೋಚಿಂಗ್ ಕೇಂದ್ರಗಳು ನನಗೆ ಪ್ರವೇಶ ನೀಡಿರಲಿಲ್ಲ. ರೆಹಮಾನ್ ಹಾಗೂ ಗರೀಮಾ ಅವರಿದ್ದ ಕೋಚಿಂಗ್ ಕೇಂದ್ರದಲ್ಲಿ ನನಗೆ ಪ್ರವೇಶ ಲಭಿಸಿತು. ಅಲ್ಲಿಂದ ನನ್ನ ಬದುಕಿನ ದಿಕ್ಕೇ ಬದಲಿಸಿತು. ಸರ್ಕಾರದಿಂದಲೂ ನನಗೆ ಸಾಕಷ್ಟು ನೆರವು ಲಭಿಸಿದೆ. ಇವೆಲ್ಲದರಿಂದ ನಾನು ಈ ಹಂತ ತಲುಪಿದ್ದೇನೆ' ಎಂದಿದ್ದಾರೆ.
'ಕಷ್ಟದ ದಿನಗಳಲ್ಲಿ ನನ್ನ ಪಾಲಕರು, ಸೋದರರು ಹಾಗೂ ಸೋದರಿಯರು ನನಗೆ ಬೆಂಬಲವಾಗಿ ನಿಂತರು. ಶಿಕ್ಷಕರು ನಮ್ಮ ಬದುಕಿನ ದೊಡ್ಡ ವರ ಎಂಬುದನ್ನು ರೆಹಮಾನ್ ಸರ್ ಅವರು ಸಾಬೀತು ಮಾಡಿದರು. ತರಬೇತಿ ಸಂದರ್ಭದಲ್ಲಿ ನನಗೆ ಲಭಿಸಿದ ಎಲ್ಲಾ ಗೆಲುವುಗಳನ್ನು ನಾನು ಅವರಿಗೆ ಅರ್ಪಿಸುತ್ತೇನೆ' ಎಂದು ಮಾನ್ವಿ ಮಧು ತಿಳಿಸಿದ್ದಾರೆ.