ಜಮ್ಮು: ಕಣಿವೆ ರಾಜ್ಯದಲ್ಲಿ 1931ರಲ್ಲಿ ಸಮುದಾಯದ ಮೇಲೆ ನಡೆದ ದೌರ್ಜನ್ಯ ವಿರೋಧಿಸಿ ಕಾಶ್ಮೀರಿ ಪಂಡಿತರು ಇಲ್ಲಿನ ರಾಜಭವನದ ಎದುರು ಶನಿವಾರ ಕರಾಳ ದಿನ ಆಚರಿಸಿದರು.
ಅಖಿಲ ರಾಜ್ಯ ಕಾಶ್ಮೀರಿ ಪಂಡಿತ್ ಕಾನ್ಫರೆನ್ಸ್ (ಎಎಸ್‌ಕೆಪಿಸಿ) ವತಿಯಿಂದ ವಲಸೆ ಬಂದ ಪಂಡಿತರು ಕರಾಳದಿನದಲ್ಲಿ ಭಾಗಿಯಾದರು.
1931ರಲ್ಲಿ ಇಲ್ಲಿ ಆಡಳಿತ ನಡೆಸುತ್ತಿದ್ದ ಡೋಗ್ರಾ ಸೇನೆಯು ಹತ್ಯೆಗೈದ 22 ಕಾಶ್ಮೀರ ಪಂಡಿತರ ಗೌರವಾರ್ತವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಜುಲೈ 13ರಂದು ಸಾರ್ವಜನಿಕ ರಜೆ ನೀಡಲಾಗುತ್ತದೆ. ಅಂದು ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು.
'ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ನೀಡಿದ್ದ ವಿಶೇಷ ಸ್ಥಾನಮಾನವನ್ನು 2019ರಲ್ಲಿ ಹಿಂಪಡೆದ ನಂತರ ಒಂದು ರಾಜ್ಯ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶವನ್ನು ಸರ್ಕಾರ ರಚಿಸಿತು. ನಂತರ 2020ರಲ್ಲಿ ಹೊರಡಿಸಿದ ರಾಜ್ಯಪತ್ರದಲ್ಲಿ ಈ ಹಿಂದಿನಂತೆ ಜುಲೈ 13ರಂದು ನೀಡಲಾಗುತ್ತಿದ್ದ ರಜೆಯನ್ನು ಸೇರಿಸಲಾಗಿಲ್ಲ' ಎಂದು ಪಂಡಿತರು ಆರೋಪಿಸಿದರು.
ರಾಜಭವನದ ಎದುರು ಜಮಾಯಿಸಿದ ಪಂಡಿತರು ಫಲಕ ಹಿಡಿದು ಘೋಷಣೆ ಕೂಗಿದರು. '1931ರಲ್ಲೇ ಪ್ರತ್ಯೇಕತೆ ಹಾಗೂ ಭಯೋತ್ಪಾದನೆಯ ಬೀಜವನ್ನು ಬಿತ್ತಲಾಗಿತ್ತು. ಅದನ್ನು ಹಿಂದಿನ ಸರ್ಕಾರಗಳು ಹುತಾತ್ಮರ ದಿನದ ಆಚರಣೆ ಮೇಲೆ ನಿಗಾ ಇರಿಸುವ ಮೂಲಕ ಆ ಬೀಜವನ್ನು ಪೋಷಿಸಿ ಬೆಳೆಸಿದವು' ಎಂದು ದೂರಿದರು.
'ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೂಕ್ತ ನ್ಯಾಯ, ರಾಜ್ಯಕ್ಕೆ ಮರಳುವ ವಾತಾವರಣ ಹಾಗೂ ಅಲ್ಲಿ ಸೂಕ್ತ ಪುನರ್ವಸತಿ ಕಲ್ಪಿಸಬೇಕು' ಎಂದು ಆಗ್ರಹಿಸಿದರು.