HEALTH TIPS

ಶಸ್ತ್ರಾಸ್ತ್ರ ಖರೀದಿಸಲು ಮ್ಯಾನ್ಮಾರ್‌ ನ ಸೇನಾಡಳಿತಕ್ಕೆ ಬ್ಯಾಂಕಿಂಗ್ ಸಂಸ್ಥೆಗಳ ನೆರವು: ವಿಶ್ವಸಂಸ್ಥೆ ವರದಿ

           ಜಿನೆವಾ : ಮ್ಯಾನ್ಮಾರ್‌ ನಲ್ಲಿ ಪ್ರಜಾಪ್ರಭುತ್ವದ ಪರ ನಡೆಯುತ್ತಿರುವ ಹೋರಾಟ, ಪ್ರತಿಭಟನೆಯನ್ನು ಹತ್ತಿಕ್ಕಲು ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಬ್ಯಾಂಕಿಂಗ್ ಸಂಸ್ಥೆಗಳು ನೆರವಾಗಿದೆ. ಪ್ರತಿಭಟನಾಕಾರರನ್ನು ನಿರ್ದಾಕ್ಷಿಣ್ಯವಾಗಿ ದಮನಿಸುತ್ತಿರುವ ಸೇನಾಡಳಿತವನ್ನು ಪ್ರತ್ಯೇಕಿಸುವ ಅಂತರರಾಷ್ಟ್ರೀಯ ಪ್ರಯತ್ನಗಳು ವಿಫಲವಾಗುವ ಸಾಧ್ಯತೆಯಿದೆ ಎಂದು `ಶಸ್ತ್ರಾಸ್ತ್ರ ವ್ಯವಹಾರಗಳ ಕುರಿತ ವಿಶ್ವಸಂಸ್ಥೆ ವರದಿ'ಯಲ್ಲಿ ಉಲ್ಲೇಖಿಸಲಾಗಿದೆ.

           ಮ್ಯಾನ್ಮಾರ್‌ ನ ಸೇನಾಡಳಿತವನ್ನು ಜಾಗತಿಕ ವೇದಿಕೆಯಲ್ಲಿ ಪ್ರತ್ಯೇಕಿಸುವ ಅಂತರರಾಷ್ಟ್ರೀಯ ಪ್ರಯತ್ನಗಳು ಮಿಲಿಟರಿ ಸಾಧನಗಳು, ಶಸ್ತ್ರಾಸ್ತ್ರಗಳನ್ನು ಖರೀದಿಸುವ ಸೇನಾಡಳಿತದ ಸಾಮಥ್ರ್ಯವನ್ನು ಕುಂಠಿತಗೊಳಿಸಿದಂತೆ ಕಂಡುಬರುತ್ತದೆ. ಆದರೂ ಸೇನಾಡಳಿತವು 2023ರ ಮಾರ್ಚ್‍ವರೆಗಿನ 12 ತಿಂಗಳಾವಧಿಯಲ್ಲಿ 253 ದಶಲಕ್ಷ ಡಾಲರ್ ಮೌಲ್ಯದ ದ್ವಿ- ಬಳಕೆ ತಂತ್ರಜ್ಞಾನಗಳು, ಉತ್ಪಾದನಾ ಸಾಧನಗಳು ಹಾಗೂ ಇತರ ಉಪಕರಣಗಳನ್ನು ಆಮದು ಮಾಡಿಕೊಂಡಿದ್ದು ಈ ಖರೀದಿಗಳಿಗೆ ನೆರೆಯ ದೇಶವಾಗಿರುವ ಥೈಲ್ಯಾಂಡ್ ಸೇರಿದಂತೆ ಅಂತರರಾಷ್ಟ್ರೀಯ ಬ್ಯಾಂಕ್‍ಗಳ ಸಹಾಯವನ್ನು ಪಡೆದಿದೆ ಎಂದು ಮ್ಯಾನ್ಮಾರ್‌ ನ ಮಾನವಹಕ್ಕುಗಳ ಕುರಿತ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಟಾಮ್ ಆಂಡ್ರೂಸ್ ವಿಶ್ವಸಂಸ್ಥೆಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ.

             ಸಿಂಗಾಪುರದಿಂದ ಆಮದು ಪ್ರಮಾಣ 2022ರಲ್ಲಿ 110 ದಶಲಕ್ಷ ಡಾಲರ್ ಗೂ ಹೆಚ್ಚಿದ್ದರೆ, 2023ಕ್ಕೆ ಇದು ಕೇವಲ 10 ದಶಲಕ್ಷ ಡಾಲರ್ ಗೆ ಕುಸಿದಿದೆ. ಆದರೆ ಥಾಯ್ಲಂಡ್‍ನ ಸಂಸ್ಥೆಗಳು ಈ ಅಂತರವನ್ನು ಭಾಗಶಃ ತುಂಬಿದ್ದು 2023ರಲ್ಲಿ 120 ದಶಲಕ್ಷ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳು ಹಾಗೂ ವಸ್ತುಗಳನ್ನು ಪೂರೈಸಿದ್ದು ಹಿಂದಿನ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚು ಎಂದು ವರದಿ ಹೇಳಿದೆ.

2021ರಲ್ಲಿ ಆಂಗ್‍ಸಾನ್ ಸೂಕಿ ಅವರ ಪ್ರಜಾಪ್ರಭುತ್ವ ಸರಕಾರವನ್ನು ಕ್ಷಿಪ್ರ ದಂಗೆಯ ಮೂಲಕ ಪದಚ್ಯುತಗೊಳಿಸಿದ ಸೇನೆಯು ಅಧಿಕಾರ ವಶಪಡಿಸಿಕೊಂಡಂದಿನಿಂದಲೂ ದೇಶದಾದ್ಯಂತ ವ್ಯಾಪಕ ವಿರೋಧ, ಪ್ರತಿಭಟನೆ ಭುಗಿಲೆದ್ದಿದೆ. ಜತೆಗೆ ಗಡಿಭಾಗದಲ್ಲಿ ಬುಡಕಟ್ಟು ಸಮುದಾಯದ ಸಶಸ್ತ್ರ ಹೋರಾಟಗಾರರ ಪಡೆಯ ಸವಾಲನ್ನು ಎದುರಿಸಬೇಕಿದೆ. ಸೇನೆಯ ಕ್ರಮವನ್ನು ಖಂಡಿಸಿ ಪಾಶ್ಚಿಮಾತ್ಯ ದೇಶಗಳು ಮ್ಯಾನ್ಮಾರ್‌ ನ ಮಿಲಿಟರಿ, ಬ್ಯಾಂಕ್‍ಗಳು ಹಾಗೂ ಸಂಬಂಧಿತ ವ್ಯವಹಾರಗಳ ಮೇಲೆ ಹಲವು ಆರ್ಥಿಕ ನಿರ್ಬಂಧಗಳನ್ನು ವಿಧಿಸಿವೆ.

               ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಯ ವರದಿಯನ್ನು ಪರಿಶೀಲಿಸಲಾಗುವುದು. ದೇಶದ ಬ್ಯಾಂಕಿಂಗ್ ಮತ್ತು ಹಣಕಾಸಿನ ಸಂಸ್ಥೆಗಳು ಇತರ ಪ್ರಮುಖ ಹಣಕಾಸು ವ್ಯವಸ್ಥೆಗಳಂತೆಯೇ ಶಿಷ್ಟಾಚಾರವನ್ನು ಪಾಲಿಸುತ್ತಿವೆ ಎಂದು ಥೈಲ್ಯಾಂಡ್‍ನ ವಿದೇಶಾಂಗ ಇಲಾಖೆ ಹೇಳಿದೆ.

► ವಿಶ್ವಸಂಸ್ಥೆ ವರದಿ ನಿರಾಕರಿಸಿದ ಮ್ಯಾನ್ಮಾರ್ ಸೆಂಟ್ರಲ್ ಬ್ಯಾಂಕ್

             ಪ್ರತಿಭಟನೆಯನ್ನು ಹತ್ತಿಕ್ಕಲು ಅಗತ್ಯವಿರುವ ಶಸ್ತ್ರಾಸ್ತ್ರ ಹಾಗೂ ಇತರ ಮಿಲಿಟರಿ ಸಾಧನಗಳನ್ನು ಖರೀದಿಸಲು ಸೇನಾಡಳಿತಕ್ಕೆ ಬ್ಯಾಂಕಿಂಗ್ ಸಂಸ್ಥೆಗಳು ನೆರವಾಗುತ್ತಿವೆ ಎಂಬ ವಿಶ್ವಸಂಸ್ಥೆ ವರದಿಯನ್ನು ಮ್ಯಾನ್ಮಾರ್‌ ನ ಸೆಂಟ್ರಲ್ ಬ್ಯಾಂಕ್ ನಿರಾಕರಿಸಿದ್ದು , ಬ್ಯಾಂಕ್‍ನ ಮೇಲ್ವಿಚಾರಣೆಯಲ್ಲಿರುವ ಹಣಕಾಸು ಸಂಸ್ಥೆಗಳು ನಿಗದಿತ ಕಾರ್ಯವಿಧಾನವನ್ನು ಅನುಸರಿಸುತ್ತಿವೆ ಎಂದಿದೆ.

                `ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಯ ವರದಿಯನ್ನು ಸೆಂಟ್ರಲ್ ಬ್ಯಾಂಕ್ ಆಫ್ ಮ್ಯಾನ್ಮಾರ್ ಬಲವಾಗಿ ಆಕ್ಷೇಪಿಸುತ್ತದೆ. ವಿಶ್ವಸಂಸ್ಥೆಯ ವರದಿಯು ಮ್ಯಾನ್ಮಾರ್ ನಾಗರಿಕರ ಹಿತಾಸಕ್ತಿಗೆ ಮತ್ತು ಮ್ಯಾನ್ಮಾರ್ ಹಾಗೂ ಇತರ ದೇಶಗಳ ನಡುವಿನ ಸಂಬಂಧಕ್ಕೆ ತೀವ್ರ ಹಾನಿಯುಂಟು ಮಾಡುತ್ತದೆ' ಎಂದು ಶನಿವಾರ ಮಾಧ್ಯಮಗಳಲ್ಲಿ ಹೇಳಿಕೆ ಪ್ರಕಟಿಸಿದೆ. ಮ್ಯಾನ್ಮಾರ್‍ನೊಂದಿಗೆ ವಹಿವಾಟಿನಲ್ಲಿ ತೊಡಗಿರುವ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಬ್ಯಾಂಕ್‍ಗಳು ಎಲ್ಲಾ ವ್ಯಾಪಾರ ಸಂಬಂಧಗಳು ಮತ್ತು ವಹಿವಾಟುಗಳಿಗೆ ಸಮಗ್ರ ಪ್ರಾಮಾಣಿಕ ಕ್ರಮಗಳನ್ನು ಕೈಗೊಂಡಿವೆ. ಔಷಧಿಗಳು ಮತ್ತು ವೈದ್ಯಕೀಯ ಸರಬರಾಜುಗಳು, ಕೃಷಿ ಮತ್ತು ಜಾನುವಾರು ಸರಬರಾಜುಗಳು, ರಸಗೊಬ್ಬರಗಳು, ಖಾದ್ಯ ತೈಲ ಮತ್ತು ಇಂಧನದಂತಹ ಮ್ಯಾನ್ಮಾರ್ ನಾಗರಿಕರಿಗೆ ಅಗತ್ಯ ಸರಕುಗಳು ಹಾಗೂ ಮೂಲಭೂತ ಆವಶ್ಯಕತೆಗಳ ಆಮದಿಗೆ ಮಾತ್ರ ಹಣಕಾಸಿನ ವಹಿವಾಟು ನಡೆಯುತ್ತಿದೆ ಎಂದು ಬ್ಯಾಂಕ್ ಹೇಳಿಕೆ ನೀಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries