ಚೆನ್ನೈ: ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಬಯಸಿದ್ದ ಅಧ್ಯಕ್ಷ ಜೋ ಬೈಡನ್ ಸ್ಪರ್ಧೆಯಿಂದ ಹಿಂದೆ ಸರಿದು, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೆಸರು ಸೂಚಿಸುತ್ತಿದ್ದಂತೆಯೇ, ಭಾರತದ ಅವರ ಪೂರ್ವಜರ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.
ಕಮಲಾ ಹ್ಯಾರಿಸ್ ಅವರ ಅಜ್ಜ ಇಲ್ಲಿನ ತುಳಸೇಂದ್ರಪುರಂ ಗ್ರಾಮದ ಮೂಲದವರು.
2020ರಲ್ಲಿ ಕಮಲಾ ಹ್ಯಾರಿಸ್ ಅವರು ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಬಳಿಕ ಗ್ರಾಮದ ಪ್ರತಿ ಮನೆಗಳ ಮುಂದೆಯೂ ರಂಗೋಲಿ ಬಿಡಿಸಿ, ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಸಾಮೂಹಿಕ ಅನ್ನಸಂತರ್ಪಣೆ ನಡೆಸಿದ್ದರು.
ಡೆಮಾಕ್ರಟಿಕ್ ಪಕ್ಷದಿಂದ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆಯಾಗುವ ತನಕವೂ ನಿತ್ಯವೂ ವಿಶೇಷ ಪೂಜೆ ನಡೆಸುವ ಬಗ್ಗೆಯೂ ಗ್ರಾಮಸ್ಥರು ಚಿಂತನೆ ನಡೆಸಿದ್ದಾರೆ.
'ಗ್ರಾಮದ ನಿವಾಸಿಯಾಗಿದ್ದ ಪಿ.ವಿ.ಗೋಪಾಲನ್ ಅವರ ಮೊಮ್ಮಗಳಾದ ಕಮಲಾ ಹ್ಯಾರಿಸ್ ಅಮೆರಿಕ ಅಧ್ಯಕ್ಷೀಯ ಸ್ಥಾನ ಅಭ್ಯರ್ಥಿಯಾಗಿ ಆಯ್ಕೆಯಾಗುವ ನಿರೀಕ್ಷೆಯಿದೆ. ನಂತರ ಅವರು ಡೊನಾಲ್ಡ್ ಟ್ರಂಪ್ ವಿರುದ್ಧ ಗೆಲ್ಲಲಿ ಎಂದು ವಿಶೇಷ ಪೂಜೆ ಸಲ್ಲಿಸಲು ನಿರ್ಧರಿಸಿದ್ದೇವೆ' ಎಂದು ಗ್ರಾಮದ ನಿವಾಸಿ ರಾಜೇಶ್ ತಿಳಿಸಿದರು.
ಗ್ರಾಮದ ದೇವಾಲಯದ ಜೀರ್ಣೋದ್ಧಾರಕ್ಕಾಗಿ ₹5 ಸಾವಿರ ದೇಣಿಗೆ ನೀಡಿದವರಲ್ಲಿ ಕಮಲಾ ಹ್ಯಾರಿಸ್, ಚಿಕ್ಕಪ್ಪ ಬಾಲಚಂದ್ರನ್ ಗೋಪಾಲನ್ ಹೆಸರು ಪ್ರಮುಖವಾಗಿದೆ. ದೇವಾಲಯದ ಆಡಳಿತ ಮಂಡಳಿಯೂ ಈಗಲೂ ಬಾಲಚಂದ್ರನ್ ಗೋಪಾಲನ್, ಸರಳಾ ಗೋಪಾಲನ್ ಅವರಿಗೆ ವಿಭೂತಿ, ಕುಂಕುಮವನ್ನು ನಿರಂತರ ಕಳುಹಿಸಿಕೊಡುತ್ತದೆ. ವಿಶೇಷ ಹಬ್ಬದ ಸಂದರ್ಭದಲ್ಲಿ ಅವರಿಗೆ ಆಹ್ವಾನ ಕಳುಹಿಸುತ್ತಾರೆ.
ಗೋಪಾಲನ್ ಕುಟುಂಬದ ಸದಸ್ಯರು ಬಹಳ ಹಿಂದೆಯೇ ಇಲ್ಲಿಂದ ಸ್ಥಳಾಂತರವಾಗಿದ್ದರೂ, ಗ್ರಾಮದೊಂದಿಗೆ ಸಂಪರ್ಕ ಬಿಟ್ಟಿಲ್ಲ. ಊರಿನ ದೇವಾಲಯ, ವಿಶೇಷ ಹಬ್ಬಗಳಿಗೆ ದೇಣಿಗೆ ನೀಡುವುದನ್ನು ತಪ್ಪಿಸಿಲ್ಲ.
'ಇಲ್ಲಿನ 'ಮಣ್ಣಿನ ಮಗ'ನ ಕುಟುಂಬದ ಸದಸ್ಯರೊಬ್ಬರು ಅಮೆರಿಕ ಅಧ್ಯಕ್ಷ ಸ್ಥಾನದ ಕಣದಲ್ಲಿರುವುದು ಸಂತಸ ತಂದಿದೆ. ಡೆಮಾಕ್ರಟಿಕ್ ಪಕ್ಷದ ಸದಸ್ಯರು ಆಯ್ಕೆಯಾಗಿ, ಅಧ್ಯಕ್ಷೆಯಾಗಿ ಆಯ್ಕೆಯಾಗಲಿ ಎಂದು ಬಯಸುತ್ತೇವೆ. ಅತ್ಯಂತ ಶಕ್ತಿಶಾಲಿ ದೇವತೆಯ ಮುಂದೆ ಪೂಜೆ ಸಲ್ಲಿಸಿದ್ದೇವೆ' ಎಂದು ಗ್ರಾಮಸ್ಥ ಆನಂದ್ ತಿಳಿಸಿದರು.
'ಅಧ್ಯಕ್ಷ ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕ ಗ್ರಾಮಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದೇನೆ' ಎಂದು ಗೋಪಾಲನ್ ಕುಟುಂಬದ ಜೊತೆ ನಿಕಟ ಸಂಪರ್ಕದಲ್ಲಿರುವ ಕಾಳಿದಾಸ್ ವಾಂಡಿಯಾರ್ ತಿಳಿಸಿದರು. ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿ 2020ರಲ್ಲಿ ಆಯ್ಕೆಯಾದ ವೇಳೆ ಇವರ ನೇತೃತ್ವದಲ್ಲಿ ಗ್ರಾಮದಲ್ಲಿ ಅದ್ಧೂರಿಯಾಗಿ ಸಂಭ್ರಮಾಚರಣೆ ನಡೆದಿತ್ತು.
ಗೋಪಾಲನ್ ಮಗಳಾದ ಡಾ.ಶ್ಯಾಮಲಾ ಗೋಪಾಲನ್ ಅವರು ಜಮೈಕಾದ ಡೊನಾಲ್ಡ್ ಹ್ಯಾರಿಸ್ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. (ಕಮಲಾ ಹ್ಯಾರಿಸ್, ಮಾಯಾ ಹ್ಯಾರಿಸ್). ವೃತ್ತಿಯಲ್ಲಿ ಇಬ್ಬರೂ ವಕೀಲರಾಗಿದ್ದಾರೆ.
ಡಾ. ಶ್ಯಾಮಲಾ ಅವರು ತನ್ನಿಬ್ಬರು ಮಕ್ಕಳ ಜೊತೆಗೆ ಚೆನ್ನೈನ ಬೆಸಂತ್ ನಗರದಲ್ಲಿರುವ ತಂದೆಯ ಮನೆಗೆ ಭೇಟಿ ನೀಡುತ್ತಿದ್ದರು. ಈ ವೇಳೆ ಇಬ್ಬರು ಮೊಮ್ಮಕ್ಕಳನ್ನು ಇಲ್ಲಿನ ಇಲಿಯಾಟ್ ಬೀಚ್‌ಗೆ ಗೋಪಾಲನ್ ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದರು.