ನವದೆಹಲಿ: ಗುರುವಾಯೂರು ದೇವಸ್ವಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಂಗಾಮಿ ನೌಕರರನ್ನು ಕಾಯಂಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ದೇವಸ್ವಂನಲ್ಲಿ ಈಗಿರುವ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ದೇವಸ್ವಂ ನೇಮಕಾತಿ ಮಂಡಳಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ನ್ಯಾಯಮೂರ್ತಿಗಳಾದ ಜೆ. ಕೆ. ಮಹೇಶ್ವರಿ ಮತ್ತು ರಾಜೇಶ್ ಬಿಂದಾಲ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಈ ಬಗ್ಗೆ ಸ್ಪಷ್ಟಪಡಿಸಿದೆ.
ದೇವಸ್ವಂಲ್ಲಿ ದೀರ್ಘ ಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಹಂಗಾಮಿ ನೌಕರರಿಗೆ ಹೊಸ ನೇಮಕಾತಿ ಪ್ರಕ್ರಿಯೆಯಲ್ಲಿ ವಯೋಮಿತಿ ಸಡಿಲಿಕೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ನೌಕರರಿಗೆ ಸಮಾಧಾನ ತಂದಿದೆ. ಇದಲ್ಲದೆ, ನೇಮಕಾತಿ ಮಂಡಳಿಯು ಈ ಉದ್ಯೋಗಿಗಳ ಕೆಲಸದ ಅನುಭವವನ್ನು ಸಹ ಪರಿಗಣಿಸಬೇಕು ಎಂದೂ ಸೂಚಿಸಲಾಗಿದೆ.
ಹಂಗಾಮಿ ನೌಕರರನ್ನು ಕಾಯಂಗೊಳಿಸುವಂತೆ ಆಗ್ರಹಿಸಿ 242 ನೌಕರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ವಕೀಲರಾದ ಕೈಲಾಸನಾಥ ಪಿಳ್ಳ, ಆರ್.ಬಸಂತ್, ವಿ. ಗಿರಿ ಮತ್ತಿತರರು ಹಂಗಾಮಿ ನೌಕರರ ಪರ ಹಾಜರಾಗಿದ್ದರು.