ಕರ್ನಾಟಕ ರಾಜ್ಯದ ಖಾಸಗಿ ಉದ್ಯಮಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಮಸೂದೆಯನ್ನು ಮಂಡಿಸಿ ಜಾರಿ ಮಾಡಲು ಹೊರಟಿದ್ದ ರಾಜ್ಯ ಸರ್ಕಾರದ ಕ್ರಮವು ಸಂವಿಧಾನ ವಿರೋಧ ಹಾಗೂ ವಿವೇಚನಾರಹಿತ ಕ್ರಮ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದು, ಮಾತ್ರವಲ್ಲದೇ ಘೋಷಿಸಿದ ಕ್ರಮದಿಂದ ಹಿಂದೆ ಸರಿದ ಸಿದ್ದರಾಮಯ್ಯ ಸರ್ಕಾರದ ಕ್ರಮ ಕುರಿತೂ ತರೂರ್ ಸಂತಸ ವ್ಯಕ್ತಪಡಿಸಿದ್ದಾರೆ.
ಸಂವಿಧಾನದ ಪ್ರಕಾರ ದೇಶದ ಪ್ರತಿಯೊಬ್ಬ ಪ್ರಜೆಗೂ ದೇಶದೊಳಗೆ ಸ್ವತಂತ್ರವಾಗಿ ಬದುಕುವ, ವೃತ್ತಿ ಕೈಗೊಳ್ಳುವ ಹಾಗೂ ಸಂಚರಿಸುವ ಮುಕ್ತ ಅವಕಾಶವನ್ನು ನೀಡಲಾಗಿದೆ. ಒಂದೊಮ್ಮೆ ಎಲ್ಲಾ ರಾಜ್ಯಗಳು ಇಂಥ ಕಾನೂನು ಜಾರಿಗೆ ತರಲು ಹೊರಟರೆ ಅದು ಸಂವಿಧಾನ ವಿರೋಧಿಯಾಗಲಿದೆ. ಹೀಗಾಗಿ ಕರ್ನಾಟಕದ ಮುಖ್ಯಮಂತ್ರಿಯದ್ದು ಬುದ್ಧಿವಂತಿಕೆಯ ನಿರ್ಧಾರವಲ್ಲ’ ಎಂದು ಹೇಳಿದ್ದಾರೆ.
ಅಂತೆಯೇ ‘ಇಂಥದ್ದೇ ಪ್ರಯತ್ನಕ್ಕೆ ಕೈಹಾಕಿದ್ದ ಹರಿಯಾಣ ಸರ್ಕಾರದ ಮಸೂದೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಆದರೆ ಕರ್ನಾಟಕ ಇಂಥದ್ದೊಂದು ಯತ್ನಕ್ಕೆ ಏಕೆ ಕೈಹಾಕಿತು ಎಂಬುದೇ ಅರ್ಥವಾಗುತ್ತಿಲ್ಲ. ಸರ್ಕಾರದ ಈ ಕ್ರಮದಿಂದ ಅಲ್ಲಿನ ವಹಿವಾಟು, ಉದ್ದಿಮೆಗಳು ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳಕ್ಕೆ ಸ್ಥಳಾಂತರಗೊಳ್ಳುವ ಅಪಾಯವೂ ಇದೆ’ ಎಂದು ಶಶಿತರೂರ್ ಎಚ್ಚರಿಕೆ ನೀಡಿದ್ದಾರೆ.