ಢಾಕಾ: ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿಗೆ ಸಂಬಂಧಿಸಿದ ವಿವಾದಾತ್ಮಕ ನೀತಿ ವಿರೋಧಿಸಿ ವಿದ್ಯಾರ್ಥಿಗಳು ದೇಶವ್ಯಾಪಿ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ, ಕೋಟಾ ಕಡಿತಗೊಳಿಸಿ ಬಾಂಗ್ಲಾದೇಶ ಸುಪ್ರೀಂ ಕೋರ್ಟ್ ಭಾನುವಾರ ಆದೇಶಿಸಿದೆ.
ಕೋಟಾ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಸೇನೆಯ ನಿವೃತ್ತ ಸಿಬ್ಬಂದಿಯ ಮಕ್ಕಳು, ಸಂಬಂಧಿಕರಿಗೆ ನೀಡಿದ್ದ ಕೋಟಾವನ್ನು ಶೇ 5ಕ್ಕೆ ಇಳಿಕೆ ಮಾಡಿ ಆದೇಶಿಸಿದೆ.
ಅರ್ಹತೆ ಆಧಾರದಲ್ಲಿ ಶೇ 93ರಷ್ಟು ಹುದ್ದೆಗಳನ್ನು ಭರ್ತಿ ಮಾಡಬೇಕು. ಉಳಿದ ಶೇ 2ರಷ್ಟು ಹುದ್ದೆಗಳನ್ನು ಅಲ್ಪಸಂಖ್ಯಾತರು, ಅಂಗವಿಕಲರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಮೀಸಲಿಡುವಂತೆಯೂ ಆದೇಶಿಸಿದೆ.
ಸುಪ್ರೀಂ ಕೋರ್ಟ್‌ನ ಈ ತೀರ್ಪನ್ನು, ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಂದ ಭಾಗಶಃ ಗೆಲುವು ಎಂದೇ ಹೇಳಲಾಗುತ್ತಿದೆ.
ಸರ್ಕಾರಿ ಹುದ್ದೆಗಳ ನೇಮಕಾತಿ ವೇಳೆ, 1971ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸೇನೆ ಸಿಬ್ಬಂದಿಯ ಮಕ್ಕಳು- ಸಂಬಂಧಿಕರಿಗೆ ಶೇ 30ರಷ್ಟು ಕೋಟಾ ನೀಡಲಾಗಿತ್ತು. ವಿದ್ಯಾರ್ಥಿಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಈ ಹಿಂದಿನ ಸರ್ಕಾರ 2018ರಲ್ಲಿ ಈ ಕೋಟಾ ಪದ್ಧತಿಯನ್ನು ಸ್ಥಗಿತಗೊಳಿಸಿತ್ತು.
ಬಾಂಗ್ಲಾದೇಶದ ಹೈಕೋರ್ಟ್ ಈ ಕೋಟಾ ಪದ್ಧತಿಯನ್ನು ಜೂನ್‌ನಲ್ಲಿ ಮತ್ತೆ ಜಾರಿಗೊಳಿಸಿ ಆದೇಶ ನೀಡಿತು. ಇದನ್ನು ವಿರೋಧಿಸಿ ಪ್ರತಿಭಟನೆ ಆರಂಭಗೊಂಡಿತ್ತು.
ಅದರಲ್ಲೂ, ಢಾಕಾ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಿರತ ವಿದ್ಯಾರ್ಥಿಗಳು ಪೊಲೀಸರೊಂದಿಗೆ ಸಂಘರ್ಷಕ್ಕೆ ಇಳಿದಿದ್ದರಿಂದ, ಹಿಂಸಾಚಾರ ಭುಗಿಲೆದ್ದಿತು. ಈ ಘಟನೆಗಳಲ್ಲಿ, ಈವರೆಗೆ ಕನಿಷ್ಠ 103 ಜನರು ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸಾವಿನ ಸಂಖ್ಯೆ ಕುರಿತು ಸರ್ಕಾರ ಈ ವರೆಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಕಟಿಸಲಿದ್ದ ಹಿನ್ನೆಲೆಯಲ್ಲಿ ಸರ್ಕಾರ ಭಾನುವಾರ ರಜೆ ಘೋಷಿಸಿತ್ತು. ಸೋಮವಾರವೂ ರಜೆ ಘೋಷಿಸಿದೆ.

'ಪ್ರತಿಭಟನೆ ನಿಲ್ಲದು'
ಢಾಕಾ: ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿನ ಕೋಟಾವನ್ನು ಕಡಿತಗೊಳಿಸಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ವಿದ್ಯಾರ್ಥಿ ಸಂಘಟನೆ 'ಸ್ಟುಡೆಂಟ್ಸ್ ಅಗೇನ್‌ಸ್ಟ್ ಡಿಸ್‌ಕ್ರಿಮಿನೇಷನ್' 'ನಮ್ಮ ಹೋರಾಟ ಮುಂದುವರಿಯಲಿದೆ' ಎಂದು ಹೇಳಿದೆ. 'ಸುಪ್ರೀಂ ಕೋರ್ಟ್ ತೀರ್ಪಿನಿಂದ ನಮ್ಮ ಬೇಡಿಕೆಗಳು ಭಾಗಶಃ ಈಡೇರಿದಂತಾಗಿವೆ. ಆದರೆ ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಕುರಿತು ಸರ್ಕಾರ ಆದೇಶ ಹೊರಡಿಸುವವರಿಗೆ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವುದಿಲ್ಲ' ಎಂದು ಸಂಘಟನೆಯ ವಕ್ತಾರರೊಬ್ಬರು ಹೇಳಿದ್ದಾರೆ.