ಬ್ರಿಟನ್‌ನ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ ಧೂಳಿಪಟವಾಗಿದ್ದು ಲೇಬರ್ ಪಕ್ಷ ಭರ್ಜರಿ ವಿಜಯ ಸಾಧಿಸಿ ಅಧಿಕಾರದ ಗದ್ದುಗೆ ಏರುತ್ತಿದೆ.
2020ರಿಂದ ಲೇಬರ್ ಪಕ್ಷದ ನಾಯಕರಾಗಿರುವ ಕೀರ್ ಸ್ಟಾರ್ಮರ್ ಅವರು ಬ್ರಿಟನ್ (ಯುಕೆ) ಪ್ರಧಾನಿಯಾಗಿ ಪಟ್ಟ ಅಲಂಕರಿಸುತ್ತಿದ್ದಾರೆ.
ಕೀರ್ ಸ್ಟಾರ್ಮರ್ ಯಾರು?
ಬ್ರಿಟನ್‌ನ ಪ್ರಮುಖ ರಾಜಕಾರಣಿಯಾಗಿರುವ 61 ವರ್ಷದ ಕೀರ್ ಸ್ಟಾರ್ಮರ್ ಅವರು ಭರವಸೆಯ ನಾಯಕರಾಗಿ ಉದಯಿಸಿದ್ದು, ಅಲ್ಲಿನ ಜನ ಅವರ ಮೇಲೆ ವಿಶ್ವಾಸವಿಟ್ಟು ಈ ಬಾರಿ ಅವರಿಗೆ ಅಧಿಕಾರ ನೀಡಿದ್ದಾರೆ.
1962ರ ಸೆಪ್ಟೆಂಬರ್ 2ರಂದು ಲಂಡನ್‌ನ ಸೌತ್ ವಾಕ್‌ನಲ್ಲಿ ಜನಿಸಿರುವ ಕೀರ್ ಅವರು 2007ರಲ್ಲಿ ವಕೀಲೆ ವಿಕ್ಟೋರಿಯಾ ಅಲೆಗ್ಸಾಂಡರ್ ಅವರನ್ನು ಮದುವೆಯಾಗಿದ್ದಾರೆ. ಅವರಿಗೆ ಇಬ್ಬರು ಮಕ್ಕಳು.
ಕಾನೂನು ಪದವೀಧರರಾಗಿರುವ ಕೀರ್ ಅವರು ಲೇಬರ್ ಪಕ್ಷವನ್ನು ಸಶಕ್ತ ಮಾಡಿಕೊಂಡು ಬಂದಿದ್ದರಿಂದ ಆ ಪಕ್ಷ ಇಂದು ಭರ್ಜರಿ ಜಯ ಸಾಧಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಾಲೇಜು ದಿನಗಳಿಂದಲೇ ಅಂದರೆ 16 ನೇ ವಯಸ್ಸಿನಿಂದಲೇ ಅವರು ಲೇಬರ್ ಪಕ್ಷದೊಂದಿಗೆ ಗುರುತಿಸಿಕೊಂಡು ಪಕ್ಷ ಸಂಘಟನೆ ಹಾಗೂ ಆಡಳಿತ ಪಕ್ಷದ ವೈಫಲ್ಯಗಳನ್ನು ತೆರೆದಿಡುವಲ್ಲಿ ಪ್ರಮುಖ ಪಾತ್ರ ವಹಿಸಿಕೊಂಡು ಬಂದಿದ್ದರು.
ಅವರು 2015ರಿಂದಲೂ ಹೌಸ್ ಕಾಮನ್ಸ್‌ನ ಸದಸ್ಯರಾಗಿ ಚುನಾಯಿತರಾಗುತ್ತಿದ್ದಾರೆ. ಇಂಗ್ಲೆಂಡ್‌ನ ಹಾಲ್‌ಬೋರ್ನ್ ಸಂಸದರಾಗಿ, ಕನ್ಸರ್ವೇಟಿವ್ ಪಕ್ಷದ ವೈಪಲ್ಯಗಳನ್ನು ಜನರ ಮುಂದೆ ಇಡುತ್ತಾ ಸ್ವಪಕ್ಷದಲ್ಲೇ ವಿಶ್ವಾಸ ವೃದ್ದಿಸಿಕೊಳ್ಳುತ್ತಾ ಬೆಳದಿದ್ದಾರೆ. ಅಷ್ಟೇ ಅಲ್ಲದೇ ಇದೀಗ ಜಾಗತಿಕ ನಾಯಕರಾಗಿ ಹೆಜ್ಜೆ ಇಡುತ್ತಿದ್ದಾರೆ. 2020ರಿಂದ ಹೌಸ್ ಆಫ್ ಕಾಮನ್ಸ್‌ನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.
ಈ ಚುನಾವಣೆಯಲ್ಲಿ ಕೀರ್ ಅವರು ಅಭಿವೃದ್ಧಿ, ಆರೋಗ್ಯ, ಹಸಿರು ಇಂಧನ, ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕುವುದು ಹಾಗೂ ಶಿಕ್ಷಣ ಕ್ಷೇತ್ರ ಸುಧಾರಣೆ ಎಂಬ ಐದು ಸೂತ್ರಗಳನ್ನು ಇಟ್ಟುಕೊಂಡು ಪ್ರಚಾರ ನಡೆಸಿದ್ದರು.
ಹೌಸ್ ಆಫ್ ಕಾಮನ್ಸ್‌ನ 650 ಸ್ಥಾನಗಳಲ್ಲಿ 420ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿರುವ ಲೇಬರ್ ಪಕ್ಷವು ಐದು ವರ್ಷ ಅಧಿಕಾರ ಚಲಾಯಿಸಲಿದೆ. ಬಹುಮತಕ್ಕೆ 326 ಸ್ಥಾನಗಳು ಬೇಕು. ಲೇಬರ್ ಪಾರ್ಟಿ ಸೂಪರ್ ಮೆಜಾರಿಟಿ ಗಳಿಸಿರುವುದರಿಂದ ಕೀರ್ ಅವರು ಸಾಕಷ್ಟು ಉತ್ಸಾಹದಲ್ಲಿದ್ದಾರೆ.
ಬ್ರಿಟನ್‌ನಲ್ಲಿ ಸಂಸದೀಯ ಪ್ರಜಾಪ್ರಭುತ್ವ ಜಾರಿಯಲ್ಲಿದ್ದು ಹೌಸ್ ಆಫ್ ಕಾಮನ್ಸ್ ಸಂಸತ್‌ನ ಕೆಳಮನೆಯಾದರೆ ಹೌಸ್ ಆಫ್ ಲಾರ್ಡ್ಸ್ ಸಂಸತ್‌ನ ಮೇಲ್ಮನೆಯಾಗಿದೆ.
ಕೀರ್ ಅವರು ಪ್ರಧಾನಿಯಾಗಿ ಉತ್ತಮ ಆಡಳಿತ ನೀಡುವರು ಎನ್ನುವ ವಿಶ್ವಾಸವನ್ನು ಅನೇಕ ಜಾಗತಿಕ ನಾಯಕರು ವ್ಯಕ್ತಪಡಿಸಿದ್ದು ಭಾರತದೊಂದಿಗಿನ ಉತ್ತಮ ಸಂಬಂಧಗಳನ್ನು ಮುಂದುವರೆಸಿಕೊಂಡು ಹೋಗಲಿದ್ದಾರೆ ಎನ್ನಲಾಗಿದೆ.
ಈ ನಡುವೆ ಪ್ರಧಾನಿ ರಿಷಿ ಸುನಕ್ ಸೋಲಿನ ಹೊಣೆ ಹೊತ್ತುಕೊಂಡಿದ್ದಾರೆ. ರಾಜನನ್ನು ಭೇಟಿಯಾಗಿ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಆಡಳಿತ ವಿರೋಧಿ ಅಲೆಯನ್ನು ಗೌರವಿಸುವುದಾಗಿ ಅವರು ಹೇಳಿದ್ದಾರೆ.