ಪೆರ್ಲ: ಎಣ್ಮಕಜೆ ಗ್ರಾಮದ ವಿವಿಧ ಪ್ರದೇಶದಲ್ಲಿ ಅನರ್ಹರಿಗೆ ಜಾಗ ಮಂಜೂರುಗೊಳಿಸಿಕೊಡುವ ವ್ಯವಸ್ಥಿತ ಸಂಚಿನ ವಿರುದ್ಧ ನಾಗರಿಕರು ಅಧಿಕಾರಿಗಳ ಮುಂದೆ ತಮ್ಮ ಮುನಿಸು ಪ್ರದರ್ಶಿಸಿದ್ದಾರೆ.
ಭೂರಹಿತ ಬಡ ಜನತೆಗೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರ ಹಂಚಿಕೆ ಮಾಡುತ್ತಿರುವ ಭೂಮಿಯನ್ನು ಫಲಾನುಭವಿಗಳಿಗೆ ನೀಡದೆ, ಏಜೆಂಟ್‍ಗಳ ಮೂಲಕ ಅನರ್ಹರಿಗೆ ವಿತರಿಸುತ್ತಿರುವುದಾಗಿ ಭಾರೀ ಆರೋಪ ಕೇಳಿಬರುತ್ತಿದೆ. ಕಳೆದ 20ವರ್ಷಗಳಿಂದ ಭೂಮಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವ ಜನತೆಗೆ ಭೂಮಿ ಮಂಜೂರುಗೊಳಿಸದೆ, ಹಣ ಪಡೆದು ಇಂತಹ ಜಾಗವನ್ನು ಯಾರ್ಯಾರಿಗೋ ಹಂಚಿಕೆ ಮಾಡಲಾಗುತ್ತಿದೆ. ಇದರಿಂದ ಭೂಮಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವ ಜನರು ಸಿಟ್ಟೆಗೆದ್ದು, ಉಪ್ಪಳದಲ್ಲಿ ಕಾರ್ಯಾಚರಿಸುವ ಮಂಜೇಶ್ವರ ತಾಲೂಕು ಕಚೇರಿಗೆ ತೆರಳಿ ಲ್ಯಾಂಡ್ ಅಸೈನಮೆಂಟ್ ಸಭೆ ನಡೆಯುವ ವೇಳೆ ತಮ್ಮ ಅಸಮಧಾನ ಹೊರಹಾಕಿದ್ದಾರೆ. ಎಣ್ಮಕಜೆ ಗ್ರಾಮಾಧಿಕಾರಿ ಕಚೇರಿಯ ಕೆಲವು ಅಧಿಕಾರಿಗಳು ಏಜೆಂಟ್‍ಗಳ ಸೇರಿಕೊಂಡು, ಲಕ್ಷಾಂತರ ರೂ. ಲಂಚ ಪಡೆದು ದೂರದ ಊರಿನವರಿಗೆ ಇಲ್ಲಿನ ಜಾಗ ಅಳೆದು ಹಕ್ಕುಪತ್ರ ಮಾಡಿ ಕೊಡುತ್ತಿದ್ದಾರೆ. ಎಣ್ಮಕಜೆಯ ಉಕ್ಕಿನಡ್ಕ, ಅಮೆಕ್ಕಳ, ಕುರೆಡ್ಕ,ಬೆಂಗಪದವು, ಬಜಕೂಡ್ಲು, ಖಂಡಿಗೆ ಪ್ರದೇಶಗಳಲ್ಲಿ ಈ ರೀತಿ ಸರ್ಕಾರಿ ಜಾಗವನ್ನು ಲಂಚ ಪಡೆದು ಅನರ್ಹರಿಗೆ ನೀಡಲಾಗಿದೆ. ಉಕ್ಕಿನಡ್ಕದಲ್ಲಿ ಕಳೆದ ಹಲವು ವರ್ಷಗಳಿಂದ ಗುಡಿಸಲು ಕಟ್ಟಿ ವಾಸ್ತವ್ಯಹೂಡಿದ್ದು, ನ್ಯಾಯಾಲಯದ ವ್ಯಾಜ್ಯ ಎದುರಿಸುತ್ತಿರುವ ಬಡ ಕುಟುಂಬಗಳ ಭೂಮಿಯನ್ನು ಕೆಲವು ಅಧಿಕಾರಿಗಳು ಹಣ ಪಡೆದು ಬೇರೆಯವರಿಗೆ ಅಳೆದು ನೀಡಿರುವುದಾಗಿ ದೂರು ಕೇಳಿಬರುತ್ತಿದೆ. ಕಳೆದ ಹನ್ನೆರಡು ವರ್ಷಗಳಿಂದ ಉಕ್ಕಿನಡ್ಕದಲ್ಲಿ ವಾಸ್ತವ್ಯ ಹೂಡಿರುವ ಮಹಿಳೆಯೊಬ್ಬರು ಹಕ್ಕುಪತ್ರಕ್ಕಾಗಿ ಇನ್ನೂ ಕಚೇರಿ ಅಲೆದಾಡುತ್ತಿದ್ದಾರೆ.
ಅಧಿಕಾರಿಗಳ ಮುಂದೆ ಪ್ರತಿಭಟನೆ:
ಭೂಮಿ ಹಂಚಿಕೆಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿರುವ ಎಣ್ಮಕಜೆ ಗ್ರಾಮ ಕಚೇರಿ ವ್ಯಾಪ್ತಿಯಲ್ಲಿ ಬಡವರಿಗೆ ಭೂಮಿ ನೀಡದೆ, ವಂಚಿಸಿರುವ ಕ್ರಮದ ಬಗ್ಗೆ ನಾಗರಿಕರು ರೊಚ್ಚಿಗೆದ್ದಿದ್ದಾರೆ. ಅನರ್ಹರಿಗೆ ಜಾಗ ವಿತರಿಸುವ ಜಾಲ ಸಕ್ರಿಯವಾಗಿರುವ ಮಧ್ಯೆ, ಕಳೆದ 20 ವರ್ಷಗಳಿಂದ ವಾಸ್ತವ್ಯಕ್ಕೆ ಜಾಗಕ್ಕಾಗಿ ಸಲ್ಲಿಸಿರುವ ಅರ್ಜಿ ಪರಿಗಣಿಸದ ಅಧಿಕಾರಿಗಳ ಕ್ರಮದ ವಿರುದ್ಧ ಸ್ವತಃ ಫಲಾನುಭವಿಗಳು ತಾಲೂಕು ಕಚೇರಿಯ ಲ್ಯಾಂಡ್ ಅಸೈನಮೆಂಟ್ ಸಭೆ ನಡೆಯುವ ವೇಳೆ ಮುತ್ತಿಗೆ ಹಾಕಿ ತಮ್ಮ ಪ್ರತಿಭಟನೆ ಸೂಚಿಸಿದ್ದಾರೆ.