ಕಾಸರಗೋಡು: ಜಿಲ್ಲೆಯ ಉನ್ನತ ಶಿಕ್ಷಣ ಕ್ಷೇತ್ರ ಸಶಕ್ತೀಕರಣಗೊಳಿಸಲು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ವಿಶೇಷ ಪ್ಯಾಕೇಜ್ ಮಂಜೂರು ಮಾಡಲಾಗುವುದು ಎಂದು ಉನ್ನತ ಶಿಕ್ಷಣ, ಸಾಮಾಜಿಕ ನ್ಯಾಯ ಖಾತೆ ಸಚಿವ ಆರ್. ಬಿಂದು ತಿಳಿಸಿದ್ದಾರೆ.
ಅವರು ವಿದ್ಯಾನಗರದಲ್ಲಿರುವ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ನವೀಕೃತ ಭೂವಿಜ್ಞಾನ ವಸ್ತುಸಂಗ್ರಹಾಲಯ ಹಾಗೂ ರಾಕ್ ಗಾರ್ಡನ್ ಉದ್ಘಾಟನೆ ನಡೆಸಿ ಮಾತನಾಡಿದರು.
ಜಿಲ್ಲೆಯಲ್ಲಿ ವಿವಿಧ ಕೋರ್ಸ್ಗಳನ್ನು ಒದಗಿಸುವ ಮೂಲಕ ಉನ್ನತ ಶಿಕ್ಷಣಕ್ಕಾಗಿ ಇತರ ಜಿಲ್ಲೆಗಳನ್ನು ಅವಲಂಬಿಸಿರುವ ವಿದ್ಯಾರ್ಥಿಗಳಿಗೆ ಮುಕ್ತಿ ನೀಡಲಾಗುವುದು. ಕಾಸರಗೋಡು ಜಿಲ್ಲೆ ದೊಡ್ಡ ಸಾಂಸ್ಕೃತಿಕ ಮತ್ತು ಜೈವಿಕ ವೈವಿಧ್ಯತೆಯನ್ನು ಹೊಂದಿದ್ದು, ಅನುಪಾತದ ಆಧಾರದಲ್ಲಿ ಪ್ರಗತಿಯನ್ನು ಸಾಧಿಸಬೇಕಾಗಿದೆ. ಉನ್ನತ ಶಿಕ್ಷಣಕ್ಕೆ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ೬೦೦೦ ಕೋಟಿ ಖರ್ಚು ಮಾಡಲಾಗಿದ್ದು, ಇದನ್ನು ಕೇಂದ್ರ ಸರ್ಕಾರದ ಆರ್ಥಿಕ ಪರಾಮರ್ಶೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸಚಿವರು ತಿಳಿಸಿದರು. ಈ ಸಂದರ್ಭ ಎನ್ನೆಸ್ಸೆಸ್ ಸ್ವಯಂಸೇವಕರು ಎಂಡೋ ಸಂತ್ರಸ್ತರಿಗೆ ಒದಗಿಸಲಿರುವ ಕಿಯೋಸ್ಕ್ಗಳ ಕೀಲಿಕೈಗಳನ್ನು ಹಸ್ತಾಂತರಿಸಿದರು.
ಶಾಸಕ ಎನ್.ಎ.ನೆಲ್ಲಿಕುನ್ ಅಧ್ಯಕ್ಷತೆ ವಹಿಸಿದ್ದರು. ಜಿಐಎಸ್ (ಭೌಗೋಳಿಕ ಮಾಹಿತಿ ವ್ಯವಸ್ಥೆ) ಲ್ಯಾಬ್‌ನ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಹಳೆಯ ವಿದ್ಯಾರ್ಥಿಯೂ ಆಗಿರುವ ಶಾಸಕರು ತಮ್ಮ ಆಸ್ತಿ ಅಭಿವೃದ್ಧಿ ನಿಧಿಯಿಂದ ೨೫ ಲಕ್ಷ ರೂ. ಮಂಜೂರುಗೊಳಿಸುವುದಾಗಿ ಘೋಷಿಸಿದರು. ಕಾಲೇಜಿನ ಹಳೇ ವಿದ್ಯಾರ್ಥಿ ಹಾಗೂ ಉದುಮ ಶಾಸಕ ಸಿ.ಎಚ್.ಕುಂಜAಬು ಮುಖ್ಯ ಅತಿಥಿಯಾಗಿದ್ದರು. ಭೂವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎ.ಎನ್. ಸುಂದರ, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿಗಳಾದ ಆಸಿಫ್ ಇಕ್ಬಾಲ್ ಕಾಕಶ್ಶೇರಿ, ಸಿ.ಕೆ ಅಸಲತಾ. ವಿ.ವಿ.ವಿಷ್ಣು, ಸಾಮಾಜಿಕ ನ್ಯಾಯ ಇಲಾಖೆ ಜಿಲ್ಲಾ ಅಧಿಕಾರಿ ಆರ್ಯ ಪಿ.ರಾಜ್, ಪಿಡಬ್ಲ್ಯೂಡಿ ಕಾರ್ಯಪಾಲಕ ಇಂಜಿನಿಯರ್ ಎಂ.ಸಜಿತ್, ಪಿಟಿಎ ಉಪಾಧ್ಯಕ್ಷ ಎ.ಪ್ರೇಮಜಿತ್, ಜಿಯೋ ಅಲ್ಯೂಮಿನಿ ಅಧ್ಯಕ್ಷ ಪ್ರೊ.ವಿ.ಗೋಪಿನಾಥನ್, ಹಿರಿಯ ಅಧೀಕ್ಷಕ ಎ. ರವೀಂದ್ರನಾಥ ರೈ ಭಾಗವಹಿಸಿದ್ದರು. ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ವಿ.ಎಸ್.ಅನಿಲಕುಮಾರ್ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಡಾ. ಪಿ.ವಿ. ಮಿನಿ ವಂದಿಸಿದರು.