ಕಠ್ಮಂಡು: ನೇಪಾಳದ ನೂತನ ಪ್ರಧಾನಿ ಕೆ.ಪಿ.ಶರ್ಮ ಓಲಿ ಅವರು ಇಂದು(ಭಾನುವಾರ) ಸಂಸತ್ತಿನಲ್ಲಿ ವಿಶ್ವಾಸ ಮತ ಗೆದ್ದಿದ್ದಾರೆ.
275 ಸದಸ್ಯರ ಬಲ ಹೊಂದಿರುವ ನೇಪಾಳ ಸಂಸತ್ತಿನಲ್ಲಿ ಸರ್ಕಾರ ರಚನೆಗೆ ಕನಿಷ್ಠ 138 ಸದಸ್ಯರ ಬೆಂಬಲದ ಅಗತ್ಯವಿತ್ತು. ಇಂದು ಸಂಸತ್ತಿನಲ್ಲಿ ಮತಯಾಚನೆ ಮಾಡಿದ ಕೆ.ಪಿ.ಶರ್ಮ ಓಲಿ ಅವರು 188 ಮತಗಳನ್ನು ಪಡೆಯುವ ಮೂಲಕ ಬಹುಮತಕ್ಕಿಂತ 50 ಮತಗಳನ್ನು ಹೆಚ್ಚಾಗಿ ಗಳಿಸಿದ್ದಾರೆ.
ಕಮ್ಯುನಿಷ್ಟ್ ಪಾರ್ಟಿ ಆಫ್ ನೇಪಾಳ- ಯುನಿಫೈಡ್ ಮಾರ್ಕ್ಸಿಸ್ಟ್ ಲೆನಿನಿಸ್ಟ್ (ಸಿಪಿಎನ್-ಯುಎಮ್‌ಎಲ್) ಮತ್ತು ನೇಪಾಳಿ ಕಾಂಗ್ರೆಸ್ ಪಕ್ಷಗಳ ಸಮ್ಮಿಶ್ರ ಸರ್ಕಾರದ ನಾಯಕನಾಗಿ ಓಲಿ ಅವರು ಸೋಮವಾರ (ಜುಲೈ15) ಪ್ರಮಾಣವಚನ ಸ್ವೀಕರಿಸಿದ್ದರು.
ನೇಪಾಳದ ಸಂವಿಧಾನದ ಪ್ರಕಾರ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದವರು 30 ದಿನಗಳ ಒಳಗಾಗಿ ವಿಶ್ವಾಸಮತ ಸಾಬೀತುಪಡಿಸಬೇಕು.
ಕೆ.ಪಿ.ಶರ್ಮ ಓಲಿ ಅವರು ನಾಲ್ಕನೇ ಬಾರಿಗೆ ನೇಪಾಳದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ವೇಳೆ ಸಚಿವ ಸಂಪುಟದ ಇತರೆ 21 ಸದಸ್ಯರೂ ಪ್ರಮಾಣ ವಚನ ಸ್ವೀಕರಿಸಿದ್ದರು.