ಇಸ್ಲಾಮಾಬಾದ್: ಪಾಕಿಸ್ತಾನದ ಹಿಂದೂ ಸಮುದಾಯದ ಜನಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, 2017ರಲ್ಲಿ 35 ಲಕ್ಷವಿದ್ದ ಈ ಸಮುದಾಯದ ಜನಸಂಖ್ಯೆಯು 2023ರಲ್ಲಿ 38 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕಳೆದ ವರ್ಷದ ಜನಗಣತಿಯ ಅಧಿಕೃತ ದತ್ತಾಂಶದಿಂದ ತಿಳಿದುಬಂದಿದೆ.
ಇಸ್ಲಾಮಾಬಾದ್: ಪಾಕಿಸ್ತಾನದ ಹಿಂದೂ ಸಮುದಾಯದ ಜನಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, 2017ರಲ್ಲಿ 35 ಲಕ್ಷವಿದ್ದ ಈ ಸಮುದಾಯದ ಜನಸಂಖ್ಯೆಯು 2023ರಲ್ಲಿ 38 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕಳೆದ ವರ್ಷದ ಜನಗಣತಿಯ ಅಧಿಕೃತ ದತ್ತಾಂಶದಿಂದ ತಿಳಿದುಬಂದಿದೆ.
ಈ ಮೂಲಕ ಹಿಂದೂ ಸಮುದಾಯವು ಪಾಕಿಸ್ತಾನದ ಅತ್ಯಂತ ದೊಡ್ಡ ಅಲ್ಪಸಂಖ್ಯಾತ ಸಮುದಾಯ ಎಂದು ಪಾಕಿಸ್ತಾನ ಅಂಕಿಅಂಶ ಕಾರ್ಯಾಲಯ (ಪಿಬಿಎಸ್) ಹೊರಬಿಟ್ಟಿರುವ 'ಜನಸಂಖ್ಯೆ ಮತ್ತು ವಸತಿ ಗಣತಿ- 2023'ರ ದತ್ತಾಂಶವನ್ನು ಆಧರಿಸಿ ಅಲ್ಲಿಯ ಡಾನ್ ಸುದ್ದಿಪತ್ರಿಕೆ ವರದಿ ಮಾಡಿದೆ.
2023ರಲ್ಲಿ ದೇಶದ ಒಟ್ಟು ಜನಸಂಖ್ಯೆ 24.08 ಕೋಟಿಯಷ್ಟಿದೆ. ಮುಸ್ಲಿಮರ ಜನಸಂಖ್ಯೆಯಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ. ಆ ಸಮುದಾಯದ ಜನಸಂಖ್ಯೆಯು 2017ರಲ್ಲಿ ಶೇ 96.47 ಇದ್ದು, 2023ರಲ್ಲಿ ಶೇ 96.35ಕ್ಕೆ ಇಳಿದಿದೆ.
ಇದೇವೇಳೆ, ದೇಶದ ಇತರ ಪ್ರಮುಖ ಅಲ್ಪಸಂಖ್ಯಾತ ಸಮುದಾಯಗಳ ಜನಸಂಖ್ಯೆಯು ಏರಿಕೆಯಾಗಿದೆ. ಹಿಂದೂ ಸಮುದಾಯದ ಜನಸಂಖ್ಯೆ ಏರಿಕೆಯಾಗಿದ್ದರೂ ದೇಶದ ಒಟ್ಟು ಜನಸಂಖ್ಯೆಯಲ್ಲಿ ಈ ಸಮುದಾಯದ ಜನಸಂಖ್ಯೆ ಪ್ರಮಾಣದಲ್ಲಿ ಕಡಿಮೆಯಾಗಿದೆ. ಹಿಂದೂಯೇತರ ಅಲ್ಪಸಂಖ್ಯಾತ ಸಮುದಾಯಗಳ ಜನಸಂಖ್ಯೆಯಲ್ಲಿ ಏರಿಕೆ ಕಂಡುಬಂದಿರುವುದು ಇದರಿಂದ ನಿಚ್ಚಳವಾಗುತ್ತದೆ.
26 ಲಕ್ಷ ಇದ್ದ ಕ್ರಿಶ್ಚಿಯನ್ನರ ಜನಸಂಖ್ಯೆಯು 33 ಲಕ್ಷಕ್ಕೆ ಏರಿಕೆಯಾಗಿದೆ. ಉಳಿದಂತೆ ಪಾಕಿಸ್ತಾನದಲ್ಲಿ ಅಹ್ಮದೀಯರು 1.62 ಲಕ್ಷ, ಸಿಖ್ಖರು 15,998 ಮತ್ತು ಪಾರ್ಸಿಯರು 2,348 ಸಂಖ್ಯೆಯಲ್ಲಿದ್ದಾರೆ.
ದೇಶದಲ್ಲಿ ಪುರುಷರ ಸಂಖ್ಯೆ ಹೆಚ್ಚು ಇದೆ. ಸುಮಾರು 12.43 ಕೋಟಿ ಪುರಷರಿದ್ದು, 11.71 ಕೋಟಿ ಮಹಿಳೆಯರಿದ್ದಾರೆ. ಲಿಂಗಾನುಪಾತ 1.06 ಇದೆ. 20,331 ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ.