ನವದೆಹಲಿ: ಸೇನೆಗೆ ಅತಿ ಮುಖ್ಯವಾದ ಶಸ್ತಾಸ್ತ್ರ ಸೇರಿದಂತೆ 346 ಸೇನಾ ಹಾರ್ಡ್‌ವೇರ್ ಉಪಕರಣಗಳ 'ದೇಶೀಯ ಉತ್ಪನ್ನಗಳ' ಹೊಸ ಪಟ್ಟಿಯನ್ನು ಮಂಗಳವಾರ ರಕ್ಷಣಾ ಇಲಾಖೆ ಬಿಡುಗಡೆಗೊಳಿಸಿದೆ. ಈ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ನಿಷೇಧ ಹೇರಿದ ಬಳಿಕ ಸರ್ಕಾರಿ ಸ್ವಾಮ್ಯದ ಉದ್ಯಮಗಳಲ್ಲಿ ತಯಾರಿಸಲಾಗಿದೆ.

'ರಕ್ಷಣಾ ಉತ್ಪಾದನಾ ಕೈಗಾರಿಕೆಗಳಿಗೆ ನೀಡಿದ ಹೆಚ್ಚಿನ ಉತ್ತೇಜನದಿಂದ ಕಳೆದ ಮೂರು ವರ್ಷಗಳಲ್ಲಿ 12,300 ಉತ್ಪನ್ನಗಳನ್ನು ದೇಶಿಯವಾಗಿ ಉತ್ಪಾದಿಸಲಾಗಿದೆ' ಎಂದು ರಕ್ಷಣಾ ಇಲಾಖೆ ತಿಳಿಸಿದೆ.
'ದೇಶೀಯ ಉತ್ಪನ್ನಗಳ' ಐದನೇ ಪಟ್ಟಿಯಲ್ಲಿ ಹೊಸತಾಗಿ 346 ಉಪಕರಣಗಳಿದ್ದು, ಇವುಗಳನ್ನು ರಕ್ಷಣಾ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಯಲ್ಲಿಯೇ ಉತ್ಪಾದಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
'₹1,048 ಕೋಟಿ ಮೌಲ್ಯದ ಕಚ್ಚಾ ವಸ್ತು ಸೇರಿದಂತೆ ಸೇನೆಯ ಪ್ರಮುಖ ಉಪಕರಣಗಳನ್ನು ಇಲ್ಲಿಯೇ ತಯಾರಿಸಲಾಗುತ್ತಿದೆ. ಇದು ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಜೊತೆಗೆ ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆಯನ್ನು ಹೆಚ್ಚಿಸಲಿದೆ. ಆಮದು ಪ್ರಮಾಣದಲ್ಲಿಯೂ ಇಳಿಕೆ ದಾಖಲಿಸಲಿದೆ' ಎಂದು ತಿಳಿಸಿದೆ.
ಜಾಗತಿಕವಾಗಿ, ಸೇನೆಗೆ ಸಂಬಂಧಿಸಿದ ಶಸ್ತ್ರಾಸ್ತ್ರ, ಇತರೆ ಉತ್ಪನ್ನಗಳನ್ನು ಗರಿಷ್ಠ ಪ್ರಮಾಣದಲ್ಲಿ ಆಮದು ಮಾಡುವ ರಾಷ್ಟ್ರಗಳಲ್ಲಿ ಭಾರತವೂ ಪ್ರಮುಖ ರಾಷ್ಟ್ರವಾಗಿದೆ. ದೇಶೀಯವಾಗಿಯೇ ಇವುಗಳನ್ನು ಉತ್ಪಾದಿಸುವ ಮೂಲಕ ದೇಶದ ರಕ್ಷಣಾ ಉದ್ಯಮವನ್ನು ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ.
ಮುಂದಿನ ಐದು ವರ್ಷದಲ್ಲಿ ದೇಶೀಯ ರಕ್ಷಣಾ ಉತ್ಪಾದನಾ ಕ್ಷೇತ್ರದ ವಹಿವಾಟು ₹1.75 ಲಕ್ಷ ಕೋಟಿ (25 ಬಿಲಿಯನ್ ಡಾಲರ್) ತಲುಪುವ ಗುರಿಯನ್ನು ರಕ್ಷಣಾ ಇಲಾಖೆ ಹೊಂದಿದೆ.