ಬೆಂಗಳೂರು: ಕನ್ನಡ ಮತ್ತು ಮಲಯಾಳಂ ಭಾಷೆಯ ಮಧ್ಯೆ ಬಾಂಧವ್ಯ ಬೆಸೆಯಲು ಕೇರಳ ಗಡಿ ಭಾಗದಲ್ಲಿ 'ಕನ್ನಡ-ಮಲಯಾಳಿ ಸಾಹಿತ್ಯ ಸಮ್ಮೇಳನ' ಆಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಬೆಂಗಳೂರು: ಕನ್ನಡ ಮತ್ತು ಮಲಯಾಳಂ ಭಾಷೆಯ ಮಧ್ಯೆ ಬಾಂಧವ್ಯ ಬೆಸೆಯಲು ಕೇರಳ ಗಡಿ ಭಾಗದಲ್ಲಿ 'ಕನ್ನಡ-ಮಲಯಾಳಿ ಸಾಹಿತ್ಯ ಸಮ್ಮೇಳನ' ಆಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಗರದಲ್ಲಿ ಗುರುವಾರ ಹಮ್ಮಿಕೊಂಡ ಮಲಯಾಳಿ ಭಾಷಿಕರಿಗೆ ಕನ್ನಡ ಕಲಿಕಾ ತರಗತಿಗಳ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಮತ್ತು ಮಲಯಾಳಂ ಭಾಷೆಗಳ ಮಧ್ಯೆ ಉತ್ತಮ ಬಾಂಧವ್ಯವಿದೆ. ಅನೇಕ ಮಲಯಾಳಿ ಸಾಹಿತ್ಯ ಕೃತಿಗಳು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಕನ್ನಡಕ್ಕೆ ಅನುವಾದಗೊಂಡು, ಪ್ರಕಟವಾಗಿವೆ. ಕೇರಳದ ಮಹಾತ್ಮರೆನಿಸಿದ ನಾರಾಯಣ ಗುರುಗಳ ಜಯಂತಿಯನ್ನು ರಾಜ್ಯ ಸರ್ಕಾರ ಆಚರಿಸುತ್ತಿದೆ. ನಾರಾಯಣ ಗುರುಗಳ ಸಾಹಿತ್ಯವನ್ನು ಸಹ ಕನ್ನಡ ಭಾಷೆಯಲ್ಲಿ ಅನುವಾದ ಮಾಡಿ, ಪ್ರಕಟಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ಭಾಷೆಯ ಕಲಿಕೆ ನಮಗೆ ಅಗತ್ಯವಾಗಿದ್ದು, ನಾವು ಎಲ್ಲ ಭಾಷೆಯನ್ನೂ ಕಲಿಯಬೇಕು. ಹಾಗೆಯೇ ನಮ್ಮ ಭಾಷೆಯನ್ನು ಪ್ರೀತಿಸಬೇಕು. ಭಾಷೆ-ಭಾಷೆಗಳ ಮಧ್ಯೆ ಜಗಳ ಸರಿಯಲ್ಲ. ಎಲ್ಲಾ ಭಾಷಿಕರು ಸೌಹಾರ್ದದಿಂದ ಬದುಕುವುದನ್ನು ಕಲಿಯಬೇಕು ಎಂದರು.
ಸಾಹಿತ್ಯ ಸಂಭ್ರಮ: ಸಮಾರಂಭ ಉದ್ಘಾಟಿಸಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಕನ್ನಡ-ಮಲಯಾಳಿ ಸಾಹಿತ್ಯ ಸಮ್ಮೇಳನ ಆಯೋಜನೆಯಾಗಬೇಕು. ಇದರಿಂದ ಮಲಯಾಳಿಗಳು ಹಾಗೂ ಕನ್ನಡಿಗರು ತಮ್ಮ ಭಾಷಾ ಪ್ರೇಮದ ಜತೆಗೆ ಸಾಹಿತ್ಯ ಸಂಭ್ರಮವನ್ನು ಸವಿಯಲು ಸಾಧ್ಯವಾಗುತ್ತದೆ. ಭಾಷೆ ಯಾವುದೆ ಇರಲಿ ಅದಕ್ಕೆ ತನ್ನದೆ ಆದ ಬಲ ಇರುತ್ತದೆ. ಒಂದು ಸಮಾಜದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆ ಬೆಳೆಯುವುದೇ ಭಾಷೆಯಿಂದ. ಭಾಷೆ ಬಲಿಷ್ಠವಾದರೆ ಸಮಾಜವೂ ಬಲಿಷ್ಠವಾಗುತ್ತದೆ ಎಂದು ಹೇಳಿದರು.