ತಿರುವನಂತಪುರಂ: ಕೇರಳದಲ್ಲಿ ಭಾರೀ ಮಳೆ ಮುಂದುವರಿಯಲಿರುವ ಹಿನ್ನೆಲೆಯಲ್ಲಿ ಕೇಂದ್ರ ಹವಾಮಾನ ಇಲಾಖೆ ವಿವಿಧ ಜಿಲ್ಲೆಗಳಲ್ಲಿ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಿಸಿದೆ.
ಗುರುವಾರ ವಯನಾಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಕಾಸರಗೋಡು ಸಹಿತ ಅಲ್ಲಲ್ಲಿ ಭಾರೀ ಮಳೆಯಾಗಿದೆ.
ಕೊಟ್ಟಾಯಂ, ಎರ್ನಾಕುಳಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಗುರುವಾರ ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು. ನಾಳೆ (ಶುಕ್ರವಾರ) ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ ಮತ್ತು ಅಲಪ್ಪುಳ ಜಿಲ್ಲೆಗಳಲ್ಲಿ ಕೇಂದ್ರ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿದೆ.
ಭಾರೀ ಮಳೆಯಿಂದಾಗಿ ಕುವೈತ್-ಕಣ್ಣೂರು ವಿಮಾನವನ್ನು ಮಾರ್ಗಬದಲಿಸಿ ಕೊಚ್ಚಿಗೆ ಕಳಿಸಲಾಯಿತು. ಕಣ್ಣೂರು ತಲುಪಿದ ವಿಮಾನವು ಹಲವು ಬಾರಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿತು, ಆದರೆ ಮಳೆ ಮತ್ತು ಹಿಮದಿಂದಾಗಿ ರನ್‍ವೇ ಗೋಚರತೆ ಮಸುಕಾಗಿದ್ದರಿಂದ ಸಾಧ್ಯವಾಗಲಿಲ್ಲ. ಲ್ಯಾಂಡ್ ಆಗಲು ವಿಫಲವಾದ ನಂತರ ವಿಮಾನವನ್ನು ಕೊಚ್ಚಿಗೆ ತಿರುಗಿಸಲಾಯಿತು. ಕಣ್ಣೂರಿನಲ್ಲಿ ಹವಾಮಾನ ಅನುಕೂಲಕರವಾದಾಗ ಪ್ರಯಾಣಿಕರೊಂದಿಗೆ ವಿಮಾನ ಹಿಂತಿರುಗಲಿದೆ ಎಂದು ವಿಮಾನಯಾನ ಪ್ರತಿನಿಧಿ ಮಾಹಿತಿ ನೀಡಿದರು. ಭಾರೀ ಮಳೆಯಿಂದಾಗಿ ವಿವಿಧ ವಿಮಾನ ಸೇವೆಗಳೂ ವಿಳಂಬವಾಗಿವೆ.