ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆಯಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶಾಸಕರು, ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರತಿನಿಧಿಗಳು ಹಾಗೂ ನಾನಾ ಇಲಾಖೆಗಳ ಮುಖ್ಯಸ್ಥರೊಂದಿಗೆ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ನಡೆಸಲಾಯಿತು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂದರ್ಭ ತೆರವುಗೊಳಿಸಲಾದ ಬೀದಿ ದೀಪಗಳು ಮತ್ತು ಹೈಮಾಸ್ಟ್ ದೀಪಗಳನ್ನು ಪುನ; ಅಳವಡಿಸುವ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿಗೆ ಸೂಚಿಸಲಾಯಿತು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಾಣ ಗುತ್ತಿಗೆ ಕಂಪನಿಗಳ ಪ್ರತಿನಿಧಿಗಳ ಸಭೆ ಆಯೋಜಿಸಲು ತೀರ್ಮಾನಿಸಲಾಯಿತು.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಲಪ್ಪಾಡಿಯಿಂದ ಕಾಲಿಕಡವ್ ವರೆಗೆ ಆರ್‍ಟಿಒ, ಎನ್‍ಫೋರ್ಸ್‍ಮೆಂಟ್ ಮತ್ತು ಎನ್‍ಎಚ್‍ಎಐ ಪ್ರತಿನಿಧಿಗಳು ಜಂಟಿ ಪರಿಶೀಲನೆ ನಡೆಸಿ ಸಂಚಾರಕ್ಕೆ ಅಡಚಣೆಯಾಗುತ್ತಿರುವ ಸಮಸ್ಯೆಗಳನ್ನು ತಕ್ಷಣ ಪರಿಹರಿಸಲು ಸೂಚಿಸಲಾಯಿತು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಅಂಗವಾಗಿ ಅಗತ್ಯ ದಿಕ್ಸೂಚಿ, ರಿಫ್ಲೆಕ್ಟರ್, ಸ್ಪೀಡ್ ಹಂಪ್ ಗಳು ಇಲ್ಲದೇ ಇರುವುದರಿಂದ ಮಳೆಗಾಲದಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ ಎಂಬುದಾಗಿ ಸಭೆಯಲ್ಲಿ ಶಾಸಕರು ಗಮನ ಸೆಳೆದರು. ಶಾಸಕರಾದ ಎಂ. ರಾಜಗೋಪಾಲನ್, ಇ. ಚಂದ್ರಶೇಖರನ್, ಸಿ.ಎಚ್.ಕುಞಂಬು, ಎನ್.ಎ.ನೆಲ್ಲಿಕುನ್ನು, ಎ.ಕೆ.ಎಂ.ಅಶ್ರಫ್ ವಿಷಯ ಮಂಡಿಸಿದರು.
ಟಾಟಾ ಕೋವಿಡ್ ಆಸ್ಪತ್ರೆಯ ಸ್ಥಳದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಲು ಜುಲೈ 15 ರೊಳಗೆ ಕಂಟೈನರ್‍ಗಳನ್ನು ತೆರವುಗೊಳಿಸಬೇಕು. ಹೊಸ ಆಸ್ಪತ್ರೆ ಕಟ್ಟಡಗಳನ್ನು ನಿರ್ಮಿಸಲು ಚಟ್ಟಂಚಾಲ್ ದಕ್ಷಿಣದಲ್ಲಿರುವ ಟಾಟಾ ಟ್ರಸ್ಟ್ ಸರ್ಕಾರಿ ಕೋವಿಡ್ ಆಸ್ಪತ್ರೆಯ ಸ್ಥಳವನ್ನು ಮೀಸಲಿಡಬೇಕು ಎಂದು ಶಾಸಕ ಸಿ.ಎಚ್.ಕುಞಂಬು ಸಲಹೆ ನೀಡಿದರು. ಕಂಟೈನರ್‍ಗಳನ್ನು ಜುಲೈ 15ರೊಳಗೆ ತೆರವುಗೊಳಿಸಲು ತೀರ್ಮಾನಿಸಲಾಯಿತು. ಕಾಸರಗೋಡು ರೈಲು ನಿಲ್ದಾಣದ ರಸ್ತೆ ನವೀಕರಣ ಕಾಮಗಾರಿಯನ್ನು ತ್ವರಿತಗೊಳಿಸಬೇಕು ಎಂದು ಶಾಸಕ ಎನ್.ಎ.ನೆಲ್ಲಿಕುಮನ್ ಸಲಹೆ ನೀಡಿದರು.
ಸಮುದ್ರ ಕೊರೆತ ತಡೆಗಟ್ಟುವ ಹಿನ್ನೆಲೆಯಲ್ಲಿ ಕಾವುಗೋಳಿ ಕರಾವಳಿಯ ನೆರೆಪೀಡಿತ ಪ್ರದೇಶಗಳಲ್ಲಿ ಜಿಯೋಬ್ಯಾಗ್ ರಕ್ಷಣೆಯನ್ನು ಅಳವಡಿಸಲಾಗುವುದು ಎಂದು ಮುಖ್ಯ ನೀರಾವರಿ ಕಾರ್ಯಪಾಲಕ ಅಭಿಯಂತರರು ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಂ. ರಾಜಗೋಪಾಲನ್, ಇ. ಚಂದ್ರಶೇಖರನ್, ಸಿ.ಎಚ್.ಕುಂಜಂಬು, ಎನ್.ಎ.ನೆಲ್ಲಿಕುನ್ನು, ಎ.ಕೆ.ಎಂ.ಅಶ್ರಫ್, ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತ, ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್, ಜಿಲ್ಲಾ ಯೋಜನಾಧಿಕಾರಿ ಟಿ. ರಾಜೇಶ್ ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.